ರೈತರಿಗೆ ಅನ್ಯಾಯವಾದರೆ ರೈತ ಸಂಘ ಸಹಿಸಲ್ಲ: ಎನ್‌. ಎಸ್‌ ವರ್ಮಾ

Update: 2021-09-14 11:46 GMT

ಕಾರ್ಕಳ: ರೈತರ ಬೆಳೆಗೆ ಸರಿಯಾದ ವೈಜ್ಞಾನಿಕ ಬೆಲೆ ನೀಡಿ, ರೈತರ ಎಲ್ಲಾ ಸಾಲಗಳನ್ನು ಈ ವರ್ಷ ಮನ್ನಾ ಮಾಡಿ ರೈತರನ್ನು ಬದಕಲು ಬಿಡಿ ಆ ಮೂಲಕ 'ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌' ಮಾಡಿ, ನರೇಂದ್ರ ಮೋದಿಯ 'ಸಬ್‌ ಕಾ ಸಾತ್‌ ವಿಕಾಸ್‌' ಎಂಬ ಮಾತಿನಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎನ್‌. ಎಸ್‌ ವರ್ಮ ಹೇಳಿದರು.

ಅವರು ಮಂಗಳವಾರ ಮುನಿಯಾಲಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಕರ್ನಾಟಕ ರೈತ ಸಂಘದ ಹೆಬ್ರಿ ತಾಲ್ಲೂಕು ಘಟಕದ ರೈತರ ಸಭೆಯನ್ನು ಉದ್ಘಾಟಿಸಿ  ಮಾತನಾಡಿದರು.

ರೈತರ ಸಂಘ ಪವಿತ್ರ ಸಂಘ, ರೈತರ ಹಸಿರುಶಾಲು ಪವಿತ್ರವಾದ ಶಾಲು ರಾಜಕಾರಣಿಗಳು ಹಸಿರು ಶಾಲು ಹಾಕಿ ಅಪವಿತ್ರಗೊಳಿಸಬೇಡಿ, ಶಾಲು ಹಾಕಿ ಪ್ರದರ್ಶಿಸುವ ಬದಲು ರೈತರ ಸೇವೆ ಮಾಡಿ, ರೈತರಿಗೆ ಅನ್ಯಾಯ ಆದಾಗ ರೈತ ಸಂಘ ದಿಟ್ಟ ಹೋರಾಟ ರೂಪಿಸುತ್ತದೆ, ಯಾರಿಗೂ ಅನ್ಯಾಯ ಆದರೆ ಸಂಘವು ಸಹಿಸುವುದಿಲ್ಲ, ರೈತರಿಗೆ ನೆರವು ಮತ್ತು ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ದೊರೆಯುವ ತನಕ ನಮಗೆ ನರೇಂದ್ರ ಮೋದಿ ಮತ್ತು ಬಿಜೆಪಿ ಸರ್ಕಾರದ ಬಗ್ಗೆ ವಿಶ್ವಾಸ ಇಲ್ಲ ಎಂದ ಎನ್‌. ಎಸ್‌ ವರ್ಮ ಜಿಲ್ಲಾ ಮಟ್ಟದ ಸಂಘಟನೆ, ಪ್ರತಿ ತಾಲ್ಲೂಕು ಮತ್ತು ಗ್ರಾಮದಲ್ಲೂ ರೈತ ಸಂಘದ ಸಂಘಟನೆಗೆ ಅತೀ ಶೀಘ್ರವಾಗಿ ಎಲ್ಲರ ಜತೆ ಸೇರಿ ಚಾಲನೆ ನೀಡಲಾಗುವುದು ಎಂದು ರಾಜ್ಯಾಧ್ಯಕ್ಷ ಎನ್. ಎಸ್. ವರ್ಮಾ ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಹೆಬ್ರಿ ತಾಲ್ಲೂಕು ಘಟಕದ ಪ್ರಥಮ ನೂತನ ಅಧ್ಯಕ್ಷರಾಗಿ ಪ್ರಗತಿಪರ ಕೃಷಿಕರಾದ ಸಾಮಾಜಿಕ ಮುಂದಾಳು ಮುನಿಯಾಲು ಪಿತ್ತಲುಗುಂಡಿ ಗೋಪಾಲ ಕುಲಾಲ್‌ ಅಧ್ಯಕ್ಷತೆ ವಹಿಸಿ ರೈತರ ಸಂಘವನ್ನು ಇನ್ನಷ್ಟು ಬಲಗೊಳಿಸಲು ಎಲ್ಲರ ಸಹಕಾರ ಕೋರಿದರು. ಅಶ್ವತ್‌ ರೈತ ಗೀತೆ ಹಾಡಿದರು. ನೂತನ ಸದಸ್ಯರಿಗೆ ರೈತರ ಹಸಿರು ಶಾಲು ನೀಡಿ ಗೌರವಿಸಲಾಯಿತು.

ಗೌರವಾಧ್ಯಕ್ಷ ವೃಷಭ ಜೈನ್‌ ಮಾತಿಬೆಟ್ಟು, ಉಪಾಧ್ಯಕ್ಷ ಸುರೇಶ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸಂಗೀತ ಹೆಗ್ಡೆ, ಕಾರ್ಯದರ್ಶಿ ಸುಧೀರ್‌ಶೆಟ್ಟಿ, ಖಜಾಂಜಿ ಸುರೇಶ ಶೆಟ್ಟಿ ಅಜೆಕಾರು, ಸಂಘಟನಾ ಕಾರ್ಯದರ್ಶಿ ಸಂತೋಷ ನಾಯಕ್‌ ಅಜೆಕಾರು, ಮುನಿಯಾಲು  ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ಆನಂದ ಪೂಜಾರಿ, ನಿವೃತ್ತ ಮುಖ್ಯ ಶಿಕ್ಷಕ ಚಂದ್ರಕಾಂತ್‌, ರೈತರು ಮುಖಂಡರು, ಸ್ಥಳೀಯ ಪ್ರಮುಖರು, ಗಣ್ಯರು ಭಾಗವಹಿಸಿದ್ದರು.

ಸಂಗೀತ ಹೆಗ್ಡೆ ನಿರೂಪಿಸಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News