"ಸಂವಿಧಾನವನ್ನು ಎತ್ತಿಹಿಡಿದದ್ದೇ ಅಪರಾಧವಾಯಿತು": ಉಮರ್‌ ಖಾಲಿದ್‌ ತಕ್ಷಣ ಬಿಡುಗಡೆಗೆ ಹಲವು ಗಣ್ಯರ ಆಗ್ರಹ

Update: 2021-09-14 11:48 GMT

ಹೊಸದಿಲ್ಲಿ: ಕಳೆದ ವರ್ಷದ ಈಶಾನ್ಯ ದಿಲ್ಲಿ ಹಿಂಸಾಚಾರ ಪ್ರಕರಣದಲ್ಲಿ ಯುಎಪಿಎ ಅನ್ವಯ ಬಂಧಿತರಾಗಿ ಕಳೆದೊಂದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಬಿಡುಗಡೆಗೆ ನಾಗರಿಕ ಸಮಾಜದ ಸದಸ್ಯರು, ಪತ್ರಕರ್ತರು ಹಾಗೂ ರಾಜಕಾರಣಿಗಳು ಸೋಮವಾರ ಆಗ್ರಹಿಸಿದ್ದಾರೆ.

ರಾಜಧಾನಿಯ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಸಭೆ ಸೇರಿದ ಹಲವರು, ಸರಕಾರದ ವಿರುದ್ಧ ಮಾತನಾಡಿದ್ದಕ್ಕೆ ಖಾಲಿದ್ ಅವರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟರು.

ಅನ್ಯಾಯದ ಬಂಧನದಿಂದ ಖಾಲಿದ್ ಅವರನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಸಭೆಯಲ್ಲಿ ಭಾಗವಹಿಸಿದವರು ಹೇಳಿದರು.

ಖಾಲಿದ್ ಅವರ ಏಕೈಕ ಅಪರಾಧವೆಂದರೆ ಸಂವಿಧಾನವನ್ನು ಎತ್ತಿ ಹಿಡಿದಿರುವುದು ಹಾಗೂ ತಮ್ಮ ದನಿಯನ್ನು ಎತ್ತಿರುವುದು ಎಂದು ಯೋಜನಾ ಆಯೋಗದ ಮಾಜಿ ಸದಸ್ಯ ಸಯೀದಾ ಹಮೀದ್ ಹೇಳಿದರು. ದಿಲ್ಲಿಯ ಶಾಹೀನ್ ಬಾಗ್‍ನಲ್ಲಿ ಪ್ರತಿಭಟನೆ ನಡೆದಾಗ ಖಾಲಿದ್ ಅಲ್ಲಿನ ಮಹಿಳಾ ಪ್ರತಿಭಟನಾಕಾರರಿಗೆ ಬೆಂಬಲವಾಗಿದ್ದು ಎಂದು ಅವರು ಹೇಳಿದರು.

ದಿಲ್ಲಿ ಹಿಂಸಾಚಾರದ ಸಂತ್ರಸ್ತರನ್ನು ಸಂಚುಕೋರರನ್ನಾಗಿಸಲಾಗಿದೆ ಎಂದು ದಿಲ್ಲಿ ಅಲ್ಪಸಂಖ್ಯಾತರ ಆಯೊಗದ ಮಾಜಿ ಅಧ್ಯಕ್ಷ ಝಫರುಲ್ ಇಸ್ಲಾಂ ಖಾನ್ ಹೇಳಿದರು.

ಈಶಾನ್ಯ ದಿಲ್ಲಿ ಹಿಂಸಾಚಾರ ಪ್ರಚೋದಿಸಿದವರು ಯಾರೆಂಬುದಕ್ಕೆ ವೀಡಿಯೋ ಸಾಕ್ಷ್ಯಾಧಾರಗಳಿದ್ದರೂ ಹೋರಾಟ ಮನೋವೃತ್ತಿಯ ಯುವಕರು ಹಾಗೂ ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳಿದರು.

ಲೇಖಕಿ, ಹೋರಾಟಗಾರ್ತಿ ಫರಾ ನಖ್ವಿ ಹಾಗೂ ದಿ ವೈರ್ ಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News