ಬಲಪಂಥೀಯ ಮನೋವೃತ್ತಿಯ ಬಗ್ಗೆ ಯಾರು ಮಾತನಾಡಿದರೂ ಅವರು ಕಿರುಕುಳಕ್ಕೊಳಗಾಗುತ್ತಾರೆ: ನಾಸಿರುದ್ದೀನ್ ಶಾ
ಹೊಸದಿಲ್ಲಿ: "ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಮರಳಿ ಅಧಿಕಾರ ಸ್ಥಾಪಿಸಿರುವುದನ್ನು ಭಾರತೀಯ ಮುಸ್ಲಿಮರ ಕೆಲವು ಗುಂಪುಗಳು ಸಂಭ್ರಮಿಸುತ್ತಿವೆ" ಎಂಬುದರ ಕುರಿತು ಹಿರಿಯ ನಟ ನಾಸಿರುದ್ದೀನ್ ಶಾ ಅವರ ಹೇಳಿಕೆಗಳು ಇತ್ತೀಚೆಗೆ ವಿವಾದಕ್ಕೀಡಾಗಿರುವ ನಡುವೆಯೇ, ಚಿತ್ರರಂಗದ ಮೂವರು `ಖಾನ್‍ಗಳು ಏಕೆ ಮೌನವಾಗಿರಲು ಬಯಸಿದ್ದಾರೆ ಎಂಬ ಬಗ್ಗೆ ಶಾ ಪ್ರತಿಕ್ರಿಯಿಸಿದ್ದಾರೆ. "ಅವರ ಪರವಾಗಿ ಮಾತನಾಡಲು ಸಾಧ್ಯವಿಲ್ಲವಾದರೂ ಆ ನಟರು ತಮ್ಮ ಮನಸ್ಸಿನಲ್ಲಿದ್ದುದನ್ನು ಹೇಳಿಕೊಂಡರೆ ಅವರು ಅನುಭವಿಸಬಹುದಾದ ಕಿರುಕುಳದ ಪ್ರಮಾಣವನ್ನು ಅಂದಾಜಿಸಬಲ್ಲೆ," ಎಂದು ಹೇಳಿದರು.
"ಅವರು ಬಹಳಷ್ಟು ಕಳೆದುಕೊಳ್ಳಬಹುದು, ಅವರ ಇಡೀ ಸಂಸ್ಥೆ ಬಾಧಿತವಾಗಹುದು, ನಾನು ಮತ್ತು ಜಾವೇಬ್ ಸಾಹೇಬ್ ಮಾತ್ರವಲ್ಲ ಈ ಬಲಪಂಥೀಯ ಮನೋವೃತ್ತಿಯ ಬಗ್ಗೆ ಯಾರು ಮಾತನಾಡಿದರೂ ಅವರು ಕಿರುಕುಳ ಎದುರಿಸುತ್ತಾರೆ" ಎಂದು ಶಾ ಹೇಳಿದರು.
ದೇಶದಲ್ಲಿ ʼಅಧಿಕಾರಸ್ಥರ ಪರʼ ಚಲನಚಿತ್ರಗಳನ್ನು ನಿರ್ಮಿಸಲು ದೊಡ್ಡ ಚಿತ್ರ ತಯಾರಕರು ಮತ್ತು ನಟರನ್ನು ಹೇಗೆ ಉತ್ತೇಜಿಸಲಾಗುತ್ತಿದೆ ಎಂಬ ಕುರಿತು ಕೂಡ ಶಾ ಮಾತನಾಡಿದ್ದಾರೆ.
ಪ್ರಚಾರದ ಚಿತ್ರಗಳನ್ನು ತಯಾರಿಸಿದ್ದಕ್ಕೆ ಕ್ಲೀನ್ ಚಿಟ್ ಭರವಸೆ ನೀಡಲಾಗುತ್ತಿರುವ ಕುರಿತು ತಮ್ಮಲ್ಲಿ ಯಾವುದೇ ಸಾಕ್ಷ್ಯಾಧಾರಗಳಿಲ್ಲವಾದರೂ ಇತ್ತೀಚಿಗಿನ ದಿನಗಳಲ್ಲಿ ಮಾಡಲಾಗುತ್ತಿರುವ ಕೆಲವು ದೊಡ್ಡ ಬಜೆಟ್ ಚಿತ್ರಗಳನ್ನು ಗಮನಿಸಿದಾಗ ಇದು ನಿಜವೆಂದು ಅನಿಸುತ್ತದೆ ಎಂದಿದ್ದಾರೆ.
"ಸರಕಾರದ ಪರ ಇರುವ ಚಿತ್ರಗಳನ್ನು ನಿರ್ಮಿಸುವಂತೆ ಅವರನ್ನು ಉತ್ತೇಜಿಸಲಾಗುತ್ತಿದೆ. ತಮ್ಮ ನೆಚ್ಚಿನ ನಾಯಕನ ಶ್ರಮಗಳನ್ನು ಶ್ಲಾಘಿಸಿ ಚಿತ್ರಗಳನ್ನು ನಿರ್ಮಿಸಲು ಪ್ರೋತ್ಸಾಹಿಸಲಾಗುತ್ತಿದೆ. ಅದಕ್ಕೆ ಹಣಕಾಸು ಕೂಡ ದೊರೆಯುತ್ತದೆ ಹಾಗೂ ನೇರವಾಗಿ ಹೇಳುವುದಾದರೆ ಇಂತಹ ಚಿತ್ರಗಳಿಗಾಗಿ ಅವರಿಗೆ ಕ್ಲೀನ್‍ಚಿಟ್ ಭರವಸೆಯನ್ನೂ ನೀಡಲಾಗುತ್ತದೆ. ಇಂತಹ ಎರಡು ದೊಡ್ಡ ಬಜೆಟ್ ಚಿತ್ರಗಳು ಬರುತ್ತಿವೆ ಅವುಗಳು ತಮ್ಮ ಅಜೆಂಡಾ ಅಡಗಿಸಿಡಲು ಸಾಧ್ಯವಿಲ್ಲ" ಎಂದು ಹೇಳಿದರು.
"ಮುಸ್ಲಿಂ ಆಗಿರುವುದಕ್ಕೆ ಯಾವುದೇ ರೀತಿಯ ತಾರತಮ್ಯವನ್ನು ಚಿತ್ರೋದ್ಯಮದಲ್ಲಿ ತಾನು ಎದುರಿಸಿಲ್ಲ ಎಂದು ಅಂದುಕೊಂಡಿದ್ದೇನೆ" ಎಂದು ಹೇಳಿದ ಶಾ, ಅದೇ ಸಮಯ "ತಮ್ಮ ಮನಸ್ಸಿನಲ್ಲಿದ್ದುದನ್ನು ನೇರವಾಗಿ ಮಾತನಾಡುವ ನಟರು ಕಿರುಕುಳ ಅನುಭವಿಸುತ್ತಾರೆ," ಎಂದರು.
ಈಶಾನ್ಯ ದಿಲ್ಲಿ ಹಿಂಸಾಚಾರ ಪ್ರಚೋದಿಸಿದವರು ಯಾರೆಂಬುದಕ್ಕೆ ವೀಡಿಯೋ ಸಾಕ್ಷ್ಯಾಧಾರಗಳಿದ್ದರೂ ಹೋರಾಟ ಮನೋವೃತ್ತಿಯ ಯುವಕರು ಹಾಗೂ ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳಿದರು.
ಲೇಖಕಿ, ಹೋರಾಟಗಾರ್ತಿ ಫರಾ ನಖ್ವಿ ಹಾಗೂ ದಿ ವೈರ್ ಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.