ಮಂಗಳೂರು: ಬ್ಯಾರಿ ಅಕಾಡಮಿಯ ನೂತನ ವೆಬ್ ಸೈಟ್ ಅನಾವರಣ
ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಗಾಗಿ ಸರಕಾರದಿಂದ ಅಧಿಕೃತವಾಗಿ ನೀಡಲ್ಪಟ್ಟ ನೂತನವಾಗಿ ವಿನ್ಯಾಸಗೊಂಡ ವೆಬ್ ಸೈಟನ್ನು ಮಂಗಳವಾರ ಬ್ಯಾರಿ ಅಕಾಡಮಿಯ ಕಚೇರಿಯಲ್ಲಿ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಲೋಕಾಪರ್ಣಗೈದರು.
ಅಕಾಡಮಿಯು ಪ್ರಾರಂಭವಾದಾಗಿನಿಂದ ಈ ತನಕ ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಅಕಾಡಮಿಯ ವೆಬ್ ಸೈಟನ್ನು ಹೊಂದಿತ್ತು. ಇದನ್ನು ಪ್ರತಿ ವರ್ಷ ನವೀಕರಣಗೊಳಿಸಬೇಕಾಗಿತ್ತು. ಇದೀಗ ಸರಕಾರವು ನೂತನವಾಗಿ ವಿನ್ಯಾಸಗೊಳಿಸಿ ಏಕರೂಪತೆಯನ್ನು ಹೊಂದಿರುವ ವೆಬ್ ಸೈಟ್ ನಮಗೆ ಉಚಿತವಾಗಿ ಲಭಿಸಿದೆ. ಇದನ್ನು ಅಕಾಡಮಿಯೇ ನಿರ್ವಹಿಸಬಹುದಾಗಿದೆ. ಇದರಿಂದಾಗಿ ಅಕಾಡೆಮಿಯ ದಿನನಿತ್ಯದ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ತಕ್ಷಣ ವೆಬ್ ಸೈಟಿನಲ್ಲಿ ಆಳವಡಿಸಬಹುದಾಗಿದೆ ಎಂದು ರಹೀಂ ಉಚ್ಚಿಲ್ ಹೇಳಿದರು.
ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಅತಿಥಿಯಾಗಿ ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಭಾಗವಹಿಸಿದ್ದರು. ಅಕಾಡಮಿಯ ಸದಸ್ಯ ಸಾದತ್ ಶಿವಮೊಗ್ಗ ಉಪಸ್ಥಿತರಿದ್ದರು. ಸದಸ್ಯ ಶಂಶೀರ್ ಬುಡೋಳಿ ವಂದಿಸಿದರು.