×
Ad

ಉಡುಪಿಯಲ್ಲಿ ಆಸ್ಕರ್ ಪಾರ್ಥಿವ ಶರೀರದ ಅಂತಿಮ ದರ್ಶನ: ಡಿಕೆಶಿ, ಸಚಿವ ಕೋಟ ಸಹಿತ ಹಲವು ಗಣ್ಯರಿಂದ ಗೌರವ ನಮನ

Update: 2021-09-14 19:50 IST

ಉಡುಪಿ, ಸೆ.14: ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥಿವ ಶರೀರ ಮಂಗಳವಾರ ಉಡುಪಿಗೆ ಆಗಮಿಸಿದ್ದು, ಉಡುಪಿ ಶೋಕಾ ಮಾತಾ ಇಗರ್ಜಿ, ಮೂಲ ಮನೆ ಹಾಗೂ ಕಾಂಗ್ರೆಸ್ ಭವನದಲ್ಲಿ ಸಾವಿರಾರು ಮಂದಿ ಗಣ್ಯರು, ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಅಂತಿಮ ದರ್ಶನವನ್ನು ಪಡೆದರು.

ಸೋಮವಾರ ನಿಧನರಾದ ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥಿವ ಶರೀರ ವನ್ನು ಮಂಗಳೂರಿನ ಆಸ್ಪತ್ರೆಯಿಂದ ನೇರವಾಗಿ ಉಡುಪಿ ಕವಿ ಮುದ್ದಣ ರಸ್ತೆಯಲ್ಲಿರುವ ಶೋಕಾ ಮಾತಾ ಇಗರ್ಜಿಗೆ ತರಲಾಯಿತು. ಬೆಳಗ್ಗೆ 9.30ಕ್ಕೆ ಚರ್ಚ್‌ಗೆ ಆಗಮಿಸಿದ ಪಾರ್ಥಿವ ಶರೀರವನ್ನು ಬಳಿಕ ಬೆಳಗ್ಗೆ 11ಗಂಟೆಗೆ ಅಂಬಲಪಾಡಿಯಲ್ಲಿರುವ ಮೂಲ ಮನೆಗೆ ಕೊಂಡೊಯ್ಯಲಾಯಿತು. ಈ ಎರಡೂ ಕಡೆಗಳಲ್ಲಿಯೂ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ, ಬೆಳಗ್ಗೆ 11.45ರ ಸುಮಾರಿಗೆ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನಕ್ಕೆ ತರಲಾಯಿತು.

ಈ ಸಂದರ್ಭದಲ್ಲಿ ಬ್ರಹ್ಮಗಿರಿ ಸರ್ಕಲ್‌ನಿಂದ ಕಾಂಗ್ರೆಸ್ ಭವನದ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಕಾರ್ಯಕರ್ತರು ಪುಷ್ಪಾಂಜಲಿ ಅರ್ಪಿಸಿ ಗೌರವ ಸಲ್ಲಿಸಿ ದರು. ಬಳಿಕ ಮಧ್ಯಾಹ್ನ ಎರಡು ಗಂಟೆಯವರೆಗೆ ಪಾರ್ಥಿವ ಶರೀರದ ಸಾರ್ವಜನಿಕ ವೀಕ್ಷಣೆಗಾಗಿ ಅನುವು ಮಾಡಿಕೊಡಲಾಯಿತು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಸೇರಿದಂತೆ ಹಲವು ಮಂದಿ ಗಣ್ಯರು ಆಸ್ಕರ್ ಫೆರ್ನಾಂಡಿಸ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಪಾರ್ಥಿವ ಶರೀರದ ಮುಂದೆ ಕಣ್ಣೀರಿಟ್ಟ ಆಸ್ಕರ್ ಬ್ಲೋಸಂ ಫೆರ್ನಾಂಡಿಸ್, ಮಕ್ಕಳಾದ ಓಶನ್, ಒಶಾನಿ ಹಾಗೂ ಕುಟುಂಬದ ಸದಸ್ಯರನ್ನು ಡಿಕೆಶಿ ಸಂತೈಸಿದರು.

ಜಿಲ್ಲಾ ಸೇವಾದಳದ ತಂಡದಿಂದ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲಾಯಿತು. ಸರ್ವಧರ್ಮ ಪ್ರಾರ್ಥನೆಯನ್ನು ಮಜೂರು ಮಸೀದಿಯ ಖತೀಬ್ ಅಬ್ದುಲ್ ರಶೀದ್ ಸಖಾಫಿ, ಫಲಿಮಾರು ಮಠದ ವಾಸುದೇವ ಮಚ್ಚಿಂತ್ತಾಯ, ಫಾ.ವಿಲಿಯಂ ಮಾರ್ಟಿಸ್ ನೇತೃತ್ವದಲ್ಲಿ ನೆರವೇರಿಸಲಾಯಿತು. ಭಜನಾ ತಂಡದಿಂದ ಜನೆ ಕಾರ್ಯಕ್ರಮ ಕೂಡ ಜರಗಿತು.

ಕೇರಳದ ಮುಖಂಡ ರಮೇಶ್ ಚೆನ್ನಿತ್ತಾಲ, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಪ್ರಮೋದ್ ಮಧ್ವರಾಜ್, ವಿನಯ ಕುಮಾರ್ ಸೊರಕೆ, ಯು.ಟಿ.ಖಾದರ್, ಮಾಜಿ ಶಾಸಕರಾದ ಲೋಬೊ, ಗೋಪಾಲ ಪೂಜಾರಿ, ಯು.ಆರ್.ಸಭಾಪತಿ, ಬಸವರಾಜ್, ಮೊದಿನ್ ಬಾವಾ, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಂಗಳೂರು ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಜಿ.ಎ.ಬಾವಾ, ಎಂ.ಎ.ಗಫೂರ್, ಮಿಥುನ್ ರೈ, ವರೋನಿಕಾ ಕರ್ನೆಲಿಯೋ, ಮಂಜುನಾಥ್ ಭಂಡಾರಿ, ಶ್ಯಾಮಲಾ ಭಂಡಾರಿ, ಉದ್ಯಾವರ ನಾಗೇಶ್ ಕುಮಾರ್, ಅಬ್ದುಲ್ ಅಝೀಝ್ ಹೆಜಮಾಡಿ, ಮೊಗವೀರ ಮಹಾಜನ ಸಂಘದ ಅಧ್ಷಕ್ಷ ಜಯ ಸಿ.ಕೋಟ್ಯಾನ್, ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ನೇತ್ರತಜ್ಞ ಡಾ.ಕೃಷ್ಣಪ್ರಸಾದ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಯಾಸೀನ್ ಮಲ್ಪೆ, ಜಿಲ್ಲಾ ಸಮಿತಿ ಸದಸ್ಯ ಇಕ್ಬಾಲ್ ಎಸ್.ಕೆ. ಮೊದಲಾದವರು ಅಂತಿಮ ದರ್ಶನ ಪಡೆದರು.

ಅಂತಿಮ ದರ್ಶನ ಯಾತ್ರೆಯ ಹಿನ್ನೆಲೆಯಲ್ಲಿ ಉಡುಪಿ ಚರ್ಚ್, ಅಂಬಲ ಪಾಡಿ ಮನೆ ಹಾಗೂ ಕಾಂಗ್ರೆಸ್ ಭವನ ಸೇರಿದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಸಚಿವರು, ಶಾಸಕರು, ಬಿಜೆಪಿ ಪ್ರಮುಖರಿಂದ ದರ್ಶನ
ರಾಜ್ಯ ಸರಕಾರದ ಪರವಾಗಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಂಗಳವಾರ ಉಡುಪಿ ಶೋಕ ಮಾತಾ ಇಗರ್ಜಿಯಲ್ಲಿ ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಿದರು. ಉಡುಪಿ ಶಾಸಕ ಕೆ.ರಘುಪತಿ ಭಟ್ ಸುರತ್ಕ್ನಲ್ಲಿ ಅಂತಿಮ ದರ್ಶನ ಪಡೆದರು.
ಅದೇ ರೀತಿ ಬಿಜೆಪಿ ಮಂಗಳೂರು ವಿಭಾಗಿಯ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿಪಂ ಮಾಜಿ ಅಧ್ಯಕ್ಷರಾದ ಬಿ.ಎನ್.ಶಂಕರ ಪೂಜಾರಿ, ಕಟಪಾಡಿ ಶಂಕರ ಪೂಜಾರಿ ಕೂಡ ಅಂತಿಮ ದರ್ನ ಪಡೆದು ಗೌರವ ಸಲ್ಲಿಸಿದರು.

ಅಜಾತಶತ್ರು ರಾಜಕಾರಣಿಯಾಗಿದ್ದ ಆಸ್ಕರ್ ಫೆರ್ನಾಂಡಿಸ್ ನಂತಹ ಸಜ್ಜನ ರಾಜಕಾರಣಿ ದೇಶದ ಉದ್ದಗಲಕ್ಕೂ ಇರಲು ಸಾಧ್ಯವಿಲ್ಲ. ಇವರ ಪ್ರಾಮಾಣಿಕತೆ, ಪಕ್ಷ ನಿಷ್ಠೆ ದೇಶ ಮೆಚ್ಚುವಂತದ್ದಾಗಿದೆ. ಸಂಕಷ್ಟ ಕಾಲದಲ್ಲಿ ಎರಡು ಬಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಕೇಂದ್ರ ಮತ್ತು ರಾಜ್ಯದ ಮಧ್ಯೆ ಇವರು ಬಹಳ ದೊಡ್ಡ ರಾಜಕೀಯ ಕೊಂಡಿಯಾಗಿದ್ದರು. ಬೆಂಗಳೂರು ಮೈಸೂರು ದಶಪಥ ರಸ್ತೆ ನಿರ್ಮಾಣಕ್ಕೆ ಆಸ್ಕರ್ ಅವರೇ ಕಾರಣವಾಗಿದ್ದಾರೆ. ಕಾರ್ಮಿಕರ ಮಕ್ಕಳು ಎಂಬಿಬಿಎಸ್ ಓದಲು ಇವರೇ ಕಾರಣರಾದರು. ಫೆರ್ನಾಂಡಿಸ್‌ರದ್ದು ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದ ವ್ಯಕ್ತಿತ್ವವಾಗಿದೆ. ಆಸ್ಕರ್ ನಿಧನದಿಂದ ದೇಶ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ನಷ್ಟ ಆಗಿದೆ.
-ಡಿ.ಕೆ.ಶಿವಕುಮಾರ್, ಅಧ್ಯಕ್ಷರು, ಕೆಪಿಸಿಸಿ

ಆಸ್ಕರ್ ಫೆರ್ನಾಂಡಿಸ್ ಕೇವಲ ರಾಜಕೀಯ ನಾಯಕನಲ್ಲ, ಓರ್ವ ಸಮಾಜ ಸುಧಾರಕ. ಸರ್ವ ಧರ್ಮೀಯರನ್ನು ಜೊತೆಯಾಗಿ ಕೊಂಡೊಯ್ಯುತ್ತಿದ್ದ ಅಪರೂಪದ ಚೇತನ ಎಂದು ಉಡುಪಿಯ ಜನರು ಸ್ಮರಿಸಿದ್ದಾರೆ. 9 ಬಾರಿ ಜನಪ್ರತಿನಿಧಿ ಆಗುವ ಮೂಲಕ ಉಡುಪಿ ಜಿಲ್ಲೆಗೆ ಅವರು ಕೊಟ್ಟ ಕೊಡುಗೆಗಳು ಯಾವತ್ತೂ ಸ್ಮರಣೀಯವಾಗಿ ಉಳಿಯಲಿವೆ.
-ಕೋಟ ಶ್ರೀನಿವಾಸ ಪೂಜಾರಿ, ಸಚಿವರು

ಆಸ್ಕರ್ ಫೆರ್ನಾಂಡಿಸ್ ಅಹಂಕಾರವಿಲ್ಲದ ತಾಳ್ಮೆಯ ರಾಜಕಾರಣಿ. ಆಸ್ಕರ್ ಅವರಿಗೆ ಎಂದೂ ಸಿಟ್ಟು ಬರುತ್ತಿರಲಿಲ್ಲ. ಸಣ್ಣ ಹುದ್ದೆಯಿಂದ ದೇಶದ ಅತಿ ದೊಡ್ಡ ಹುದ್ದೆಗೆ ತಲುಪಿದ ರಾಜಕಾರಣಿಯಾಗಿರುವ ಆಸ್ಕರ್‌ನಂತಹ ಸ್ವಭಾವ ಹೊಂದಿದ ಇನ್ನೊಬ್ಬ ರಾಜಕಾರಣಿ ಸಿಗಲಾರರು. ಅಪಾಯಿಂಟ್ಮೆಂಟ್ ಇಲ್ಲದೆ ಕಟ್ಟಕಡೆಯ ವ್ಯಕ್ತಿಗೂ ಆಸ್ಕರ್ ಸಿಗುತ್ತಿದ್ದರು. ಅಭಿವೃದ್ಧಿ ಕಾರ್ಯದಲ್ಲಿ ಸದಾ ಜೊತೆಗೆ ನಿಲ್ಲುತ್ತಿದ್ದ ವ್ಯಕ್ತಿತ್ವ ಇವರದ್ದಾಗಿತ್ತು. ಪ್ರಚಾರ ಪಡೆಯದೆ ಸೇವೆಮಾಡಿದ ರಾಜಕಾರಣಿ ಆಸ್ಕರ್‌ನಂತೆ ಇನ್ನೊಬ್ಬ ಆಸ್ಕರ್ ಹುಟ್ಟಲು ಸಾಧ್ಯವಿಲ್ಲ.
-ಪ್ರಮೋದ್ ಮಧ್ವರಾಜ್, ಮಾಜಿ ಸಚಿವರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News