ಸೆ.17ರಂದು ಕೃಷಿಕಾಯ್ದೆಗಳ ವಿರುದ್ಧ ಎಸ್ಎಡಿ ಪ್ರತಿಭಟನಾ ಜಾಥಾ

Update: 2021-09-14 15:19 GMT

ಚಂಡಿಗಡ, ಸೆ.14: ಕೇಂದ್ರ ಸರಕಾರವು ಮೂರು ಕೃಷಿ ಕಾಯ್ದೆಗಳನ್ನು ತಂದು ಒಂದು ವರ್ಷವಾಗಿರುವ ಹಿನ್ನೆಲೆಯಲ್ಲಿ ಸೆ.17ರಂದು ದಿಲ್ಲಿಗೆ ಪ್ರತಿಭಟನಾ ಜಾಥಾ ನಡೆಸುವುದಾಗಿ ಶಿರೋಮಣಿ ಅಕಾಲಿ ದಳ (ಎಸ್ಎಡಿ)ವು ತಿಳಿಸಿದೆ.

ಜಾಥಾಕ್ಕಾಗಿ ಪ್ರತಿ ಕ್ಷೇತ್ರದಿಂದ 500 ಕಾರ್ಯಕರ್ತರನ್ನು ಕ್ರೋಢೀಕರಿಸುವಂತೆ ಪಂಜಾಬಿನ ಮಾಲ್ವಾ ಪ್ರದೇಶದ ಎಲ್ಲ 69 ಕ್ಷೇತ್ರಗಳಲ್ಲಿಯ ಪಕ್ಷದ ನಾಯಕರಿಗೆ ಸೂಚಿಸಲಾಗಿದೆ. ಮಾಝಾ ಮತ್ತು ದಾವೋಬಾಗಳಲ್ಲಿಯ ಉಳಿದ 48 ಕ್ಷೇತ್ರಗಳ ಪ್ರತಿನಿಧಿಗಳಿಗೆ ಪ್ರತಿ ಕ್ಷೇತ್ರದಿಂದ 200 ಕಾರ್ಯಕರ್ತರನ್ನು ಸೇರಿಸುವಂತೆ ಸೂಚಿಸಲಾಗಿದೆ. ಒಟ್ಟಾರೆಯಾಗಿ ಅಂದಾಜು 45,000 ಕಾರ್ಯಕರ್ತರು ಜಾಥಾದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಲ್ವಾದ ಹಿರಿಯ ಎಸ್ಎಡಿ ನಾಯಕರೋರ್ವರು ತಿಳಿಸಿದರು.

ಪಂಜಾಬಿನ ರೈತರೊಂದಿಗೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನಾ ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಾಥಾಕ್ಕೆ ಮುನ್ನ ಮೂರು ಕೃಷಿ ಕಾಯ್ದೆಗಳ ರದ್ದತಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಲಾಗುವುದು ಎಂದು ಎಸ್ಎಡಿ ಉಪಾಧ್ಯಕ್ಷ ದಲ್ಜಿತ್ ಸಿಂಗ್ ಚೀಮಾ ತಿಳಿಸಿದರು. ವಿವಾದಾತ್ಮಕ ಕೃಷಿ ಕಾಯ್ದೆಗಳ ಕುರಿತು ಕಳೆದ ವರ್ಷ ಬಠಿಂಡಾ ಸಂಸದೆ ಹರಸಿಮ್ರತ್ ಕೌರ್ ಬಾದಲ್ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆ,ಶಿರೋಮಣಿ ಅಕಾಲಿ ದಳವು ಎನ್ಡಿಎ ಅನ್ನು ತೊರೆದಿತ್ತು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News