ದ.ಕ.: 920 ಅಕ್ರಮ ಧಾರ್ಮಿಕ ಕಟ್ಟಡ ತೆರವು ನಿರ್ಧಾರ ಬಾಕಿ; ಹೈಕೋರ್ಟ್

Update: 2021-09-14 17:26 GMT

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಅಕ್ರಮವಾಗಿ ನಿರ್ಮಿಸಲ್ಪಟ್ಟ ಧಾರ್ಮಿಕ ಕಟ್ಟಡಗಳ ತೆರವು ಪ್ರಕರಣ ವಿಚಾರಣೆ ನಡೆದಿದ್ದು, 920 ಕಟ್ಟಡಗಳ ವಿಚಾರಣೆ ಬಾಕಿ ಉಳಿದಿದೆ ಎಂದು ರಾಜ್ಯ ಉಚ್ಚ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ಜಿಲ್ಲೆಯಲ್ಲಿ 1579 ಅಕ್ರಮ ಧಾರ್ಮಿಕ ಕಟ್ಟಡಗಳು ಇವೆ ಎಂಬ ಪಟ್ಟಿಯನ್ನು ಗುರುತಿಸಲಾಗಿತ್ತು. ಈ ಪೈಕಿ 356 ಅಕ್ರಮ ಧಾರ್ಮಿಕ ಕಟ್ಟಡಗಳು ತೆರವುಗೊಂಡಿವೆ. ಇದರಲ್ಲಿ 152 ಕ್ರಮವಾಗಿದ್ದರೆ, 151 ಕಟ್ಟಡಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇನ್ನು 920 ಕಟ್ಟಡಗಳ ವಿಚಾರಣೆ ಬಾಕಿ ಉಳಿದಿದೆ ಎಂದು ಕೋರ್ಟ್ ತಿಳಿಸಿದೆ.

ಅಕ್ರಮ ಧಾರ್ಮಿಕ ಕಟ್ಟಡಗಳು ಎಂದು ಗುರುತಿಸಲಾಗಿದ್ದ ಪಟ್ಟಿಯಲ್ಲಿ 1579 ಅಕ್ರಮ ಧಾರ್ಮಿಕ ಕಟ್ಟಡಗಳು ಇದ್ದವು. ಇವುಗಳಲ್ಲಿ 1,202 ದೇವಸ್ಥಾನಗಳು, 281 ಮಸೀದಿಗಳು, 79 ಚರ್ಚ್‌ಗಳು, 17 ಇತರ ಧಾರ್ಮಿಕ ಕಟ್ಟಡಗಳು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ವಿಭಾಗಿಸಲಾಗಿತ್ತು. ಮಂಗಳೂರು ತಾಲೂಕಿನಲ್ಲಿ 363, ಮೂಡುಬಿದಿರೆ-98, ಬಂಟ್ವಾಳ-382, ಪುತ್ತೂರು-152, ಬೆಳ್ತಂಗಡಿ-298, ಸುಳ್ಯ-136, ಕಡಬ-150 ಅಕ್ರಮ ಧಾರ್ಮಿಕ ಕಟ್ಟಡಗಳೆಂದು ಗುರುತಿಸಲಾಗಿತ್ತು.

356 ಕಟ್ಟಡಗಳ ತೆರವು: ಜಿಲ್ಲೆಯಲ್ಲಿ ಇಲ್ಲಿಯವರೆಗೆ 356 ಅಕ್ರಮ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಬೆಳ್ತಂಗಡಿಯಲ್ಲಿ 111, ಪುತ್ತೂರು-84, ಸುಳ್ಯ-60, ಮಂಗಳೂರು-15, ಮೂಡುಬಿದಿರೆ-20, ಬಂಟ್ವಾಳ-40, ಕಡಬ ತಾಲೂಕಿನಲ್ಲಿ 26 ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ.

152 ಕಟ್ಟಡ ಕ್ರಮಬದ್ಧ: ಜಿಲ್ಲೆಯಲ್ಲಿ ಅಕ್ರಮ ಧಾರ್ಮಿಕ ಕಟ್ಟಡಗಳೆಂದು ಗುರುತಿಸಲ್ಪಟ್ಟ ವರದಿಯಲ್ಲಿದ್ದ ಕೆಲವು ಕಟ್ಟಡಗಳಿಗೆ ವಿನಾಯಿತಿ ದೊರೆತಂತಾಗಿದೆ. 152 ಧಾರ್ಮಿಕ ಕಟ್ಟಡಗಳು ಕ್ರಮಬದ್ಧವಾಗಿದೆ. ಮಂಗಳೂರು-31, ಮೂಡುಬಿದಿರೆ-43, ಬಂಟ್ವಾಳ-27, ಪುತ್ತೂರು-41, ಬೆಳ್ತಂಗಡಿ-4, ಸುಳ್ಯ-6, ಕಡಬ-ಶೂನ್ಯ ಕಟ್ಟಡಗಳು ಕ್ರಮಬದ್ಧವಾಗಿವೆ ಎಂದು ಕೋರ್ಟ್‌ನ ನಿರ್ದೇಶನದಲ್ಲಿ ಉಲ್ಲೇಖಗೊಂಡಿದೆ.

ಪಟ್ಟಿಯಿಂದ ಕೈಬಿಡಲಾದ ಕಟ್ಟಡಗಳು 151: ಅಕ್ರಮವಾಗಿ ನಿರ್ಮಿಸಲ್ಪಟ್ಟ ಧಾರ್ಮಿಕ ಕಟ್ಟಡಗಳ ವರದಿಯ ಪಟ್ಟಿಯಿಂದ 151 ಧಾರ್ಮಿಕ ಕಟ್ಟಡಗಳನ್ನು ಕೈಬಿಡಲಾಗಿದೆ. ಮಂಗಳೂರು-36, ಮೂಡುಬಿದಿರೆ-25, ಬಂಟ್ವಾಳ-0, ಪುತ್ತೂರು-1, ಬೆಳ್ತಂಗಡಿ-41, ಸುಳ್ಯ-0, ಕಡಬ-48 ಕಟ್ಟಡಗಳನ್ನು ಅಕ್ರಮ ಅಲ್ಲವೆಂದು ಕೈಬಿಡಲಾಗಿದೆ.

ನಿರ್ಧಾರಕ್ಕೆ ಬಾಕಿಯುಳಿದ 920 ಕಟ್ಟಡ: ಪಟ್ಟಿಯಲ್ಲಿ 920 ಧಾರ್ಮಿಕ ಕಟ್ಟಡಗಳ ತೆರವು ಕುರಿತ ವಿಚಾರಣೆ ನಡೆದಿದ್ದು, ನಿರ್ಧಾರಕ್ಕೆ ಬಾಕಿ ಉಳಿದಿದೆ. ಮಂಗಳೂರು-281, ಮೂಡುಬಿದಿರೆ-10, ಬಂಟ್ವಾಳ-315, ಪುತ್ತೂರು-26, ಬೆಳ್ತಂಗಡಿ-142, ಸುಳ್ಯ-70, ಕಡಬ-76 ಕಟ್ಟಡಗಳ ವಿಚಾರಣೆ ಬಾಕಿ ಉಳಿದಿದೆ.

ಅಕ್ರಮವೆಂದು ಗುರುತಿಸಲ್ಪಟ್ಟ 1579 ಕಟ್ಟಡಗಳ ಪೈಕಿ 659 ಕಟ್ಟಡಗಳ ಪ್ರಕರಣಗಳು ವಿಲೇವಾರಿಯಾಗಿದೆ. ಇನ್ನುಳಿದ 920 ಪ್ರಕರಣ ವಿಚಾರಣೆಗೆ ಬಾಕಿ ಇದೆ ಎಂದು ಕೋರ್ಟ್ ನಿರ್ದೇಶನ ನೀಡಿದೆ.

ದ.ಕ. ಜಿಲ್ಲಾಡಳಿತ ಧಾರ್ಮಿಕ ಕಟ್ಟಡ ತೆರವುಗೊಳಿಸುತ್ತಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ
ದ.ಕ. ಜಿಲ್ಲಾಡಳಿತವು ದೇವಸ್ಥಾನ, ಮಸೀದಿ, ಚರ್ಚ್ ಸಹಿತ ಯಾವುದೇ ಧಾರ್ಮಿಕ ಕಟ್ಟಡಗಳನ್ನು ತೆರವು ಅಥವಾ ಸ್ಥಳಾಂತರಗೊಳಿಸುತ್ತಿಲ್ಲ. ಅನಧಿಕೃತ ಕಟ್ಟಡಗಳು ಎಂದು ಗುರುತಿಸಲ್ಪಟ್ಟವುಗಳ ಬಗ್ಗೆ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲನೆ ನಡೆಸಲಿದ್ದಾರೆ. ಪೊಲೀಸ್ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಲಾಗುವುದು. ಕೆಲ ಧಾರ್ಮಿಕ ಕಟ್ಟಡಗಳು ಹಳೆಯದು, ರಸ್ತೆ ಸುರಕ್ಷತೆಗೆ ಅಪಾಯ ಎದುರಾಗದ, ಸಾರ್ವಜನಿಕರಿಗೆ ತೊಂದರೆ ಉಂಟಾಗದ, ಸೌಹಾರ್ದಕ್ಕೆ ಧಕ್ಕೆಯಾಗದ ಕಟ್ಟಡಗಳು ಕ್ರಮಬದ್ಧಗೊಳ್ಳಲಿವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನಕಲಿ ಸುದ್ದಿಗಳು ಹರಿದಾಡುತ್ತಿದ್ದು, ಗಾಳಿಸುದ್ದಿಗಳನ್ನು ಪರಿಗಣಿಸಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News