ಅಫ್ಘಾನ್: ಸದಾಚಾರ ಪ್ರಸಾರ, ದುರಾಚರ ತಡೆ ಸಚಿವಾಲಯ ಮರುಸ್ಥಾಪನೆ

Update: 2021-09-14 18:12 GMT

ಕಾಬೂಲ್, ಸೆ.14: ತಾಲಿಬಾನ್ ಸರಕಾರವು ಅಫ್ಘಾನಿಸ್ತಾನದಲ್ಲಿ ‘ಸದಾಚಾರ ಪ್ರಸರಣೆ ಹಾಗೂ ದುರಾಚಾರ ತಡೆ’  ಸಚಿವಾಲಯವನ್ನು ಮರುಸ್ಥಾಪಿಸಿದೆ. ಹಿಂದಿನ ತಾಲಿಬಾನ್ ಆಳ್ವಿಕೆಯಲ್ಲಿ ಈ ಸಚಿವಾಲಯ ಸ್ಥಾಪಿಸಲಾಗಿತ್ತು. ಆದರೆ 2001ರಲ್ಲಿ ಅಫ್ಘಾನಿಸ್ತಾನದಲ್ಲಿ ಅಮೆರಿಕ ನೇತೃತ್ವದ ಮಿತ್ರ ಪಡೆಗಳು ಹಿಂದಿನ ತಾಲಿಬಾನ್ ಆಡಳಿತವನ್ನು ಪದಚ್ಯುತಗೊಳಿಸಿದ ಬಳಿಕ ಈ ಸಚಿವಾಲಯವನ್ನು ರದ್ದುಪಡಿಸಲಾಗಿತ್ತು.

‘‘ಇಸ್ಲಾಂ ಧರ್ಮದ ಸೇವೆಯೇ ನಮ್ಮ ಪ್ರಮುಖ ಉದ್ದೇಶವಾಗಿರುವುದರಿಂದ ಸದಾಚಾರ ಪ್ರಸಾರ ಹಾಗೂ ದುರಾಚಾರ ತಡೆ ಸಚಿವಾಲಯವು ಇರುವುದು ಕಡ್ಡಾಯವಾಗಿದೆ’ ಎಂದು ಅಫ್ಘಾನಿಸ್ತಾನದಲ್ಲಿ ಕೇಂದ್ರೀಯ ವಲಯದ ವರಿಷ್ಠರಾದ ಮುಹಮ್ಮದ್ ಯೂಸುಫ್ ತಿಳಿಸಿದ್ದಾರೆ.

‘‘ಇಸ್ಲಾಮ್ ಕಾನೂನುಗಳ ಪ್ರಕಾರ ತಪ್ಪಿತಸ್ಥರನ್ನು ನಾವು ಶಿಕ್ಷಿಸಲಿದ್ದೇವೆ. ಇಸ್ಲಾಂ ಯಾವ ರೀತಿಯಾಗಿ ನಮಗೆ ಮಾರ್ಗದರ್ಶ ನೀಡುವುದೋ ನಾವು ಆ ಪ್ರಕಾರ ಶಿಕ್ಷಿಸಲಿದ್ದೇವೆ. ಉದ್ದೇಶಪೂರ್ವಕವಾಗಿ ಯಾರನ್ನಾದರೂ ಹತ್ಯೆಗೈದಲ್ಲಿ ಅಂತಹವರಿಗೆ ಮರಣದಂಡನೆ ವಿಧಿಸಲಾಗುವುದು. ಆದರೆ ಅದು ಉದ್ದೇಶಪೂರ್ವಕವಾಗಿರದೆ ಇದ್ದಲ್ಲಿ, ನಿರ್ದಿಷ್ಟ ಮೊತ್ತದ ದಂಡವನ್ನು ಪಾವತಿಯಂತಹ ಶಿಕ್ಷೆಯನ್ನು ನೀಡಲಾಗುವುದು. ಕಳ್ಳತನ ಮಾಡಿದಲ್ಲಿ ಕೈ ಕಡಿಯಲಾಗುವುದು, ಅನೈತಿಕವಾದ ಲೈಂಗಿಕ ಸಂಬಂಧ ಹೊಂದಿದವರನ್ನು ಕಲ್ಲೇಟಿನಿಂದ ಶಿಕ್ಷಿಸಲಾಗುವುದು’’ ಎಂದವರು ತಿಳಿಸಿದ್ದಾರೆ.

ಇಸ್ಲಾಮಿಕ್ ಕಾನೂನುಗಳು ಹಾಗೂ ನಿಯಮಗಳನ್ನು ಒಳಗೊಂಡ ಶಾಂತಿಯುತ ಅಫ್ಘಾನಿಸ್ತಾನವನ್ನು ನಾವು ಬಯಸುತ್ತೇವೆ. ಶಾಂತಿ ಹಾಗೂ ಇಸ್ಲಾಮಿಕ್ ಕಾನೂನುಗಳನ್ನು ಮಾತ್ರವೇ ನಾವು ಹೊಂದಲು ಬಯಸಿದ್ದೇವೆ ಎಂದು ಯೂಸುಫ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News