×
Ad

ಮಂಗಳೂರು: ಬಾಲಕಿಯ ಅತ್ಯಾಚಾರ ಪ್ರಕರಣ; ಆರೋಪಿಗೆ ಏಳು ವರ್ಷ ಕಠಿಣ ಶಿಕ್ಷೆ

Update: 2021-09-14 23:24 IST

ಮಂಗಳೂರು, ಸೆ.14: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದ (ಪೊಕ್ಸೋ) ಅಪರಾಧಿಗೆ ಮಂಗಳೂರಿನ ಹೆಚ್ಚುವರಿ ಸತ್ರ ಮತ್ತು ತ್ವರಿತಗತಿ ನ್ಯಾಯಾಲಯವು (ಪೊಕ್ಸೋ) ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ. ಬೆಳ್ತಂಗಡಿ ತಾಲೂಕು ಶಿಬಾಜೆ ಗ್ರಾಮದ ನವೀನ್ (27) ಶಿಕ್ಷೆಗೊಳಗಾದ ಆರೋಪಿ.

ಈತ ತನ್ನದೇ ಗ್ರಾಮದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಬಗ್ಗೆ 2019ರ ಜೂ.27ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅತ್ಯಾಚಾರದ ಪರಿಣಾಮವಾಗಿ ಬಾಲಕಿ ಗರ್ಭಿಣಿಯಾಗಿದ್ದಳು. ಅನಂತರ ಗರ್ಭಪಾತವಾಗಿತ್ತು. ಬೆಳ್ತಂಗಡಿಯ ಅಂದಿನ ಪ್ರೊಬೆಷನರಿ ಡಿವೈಎಸ್‌ಪಿ, ಪ್ರಭಾರ ವೃತ್ತನಿರೀಕ್ಷಕ ಗೋವಿಂದ ರಾಜು ಬಿ. ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಸಾಕ್ಷಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಾವಿತ್ರಿ ವಿ.ಭಟ್ ಆರೋಪಿ ತಪ್ಪಿತಸ್ಥನೆಂದು ತೀರ್ಮಾನಿಸಿ ಅತ್ಯಾಚಾರ ಅಪರಾಧಕ್ಕೆ 7 ವರ್ಷ ಕಠಿಣ ಸಜೆ ಮತ್ತು 5,000 ರೂ. ದಂಡ ಹಾಗೂ ಪೊಕ್ಸೋ ಕಾಯಿದೆಯ ಕಲಂನಡಿ 10 ವರ್ಷ ಕಠಿಣ ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ (ಪೊಕ್ಸೋ) ಸಿ.ವೆಂಕಟರಮಣ ಸ್ವಾಮಿ ವಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News