ಡಾ.ಕಫೀಲ್ ಖಾನ್ ವಿರುದ್ಧ ಎರಡನೇ ಅಮಾನತು ಆದೇಶಕ್ಕೆ ಅಲಹಾಬಾದ್ ಹೈಕೋರ್ಟ್ ತಡೆಯಾಜ್ಞೆ

Update: 2021-09-15 05:43 GMT
photo: ANI

ಲಕ್ನೊ: ಬಹ್ರೈಚ್ ಜಿಲ್ಲಾ ಆಸ್ಪತ್ರೆಯಲ್ಲಿ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ 2019 ರಲ್ಲಿ ಎರಡನೇ ಬಾರಿಗೆ ಮಕ್ಕಳ ವೈದ್ಯ ಡಾ.ಕಫೀಲ್ ಖಾನ್ ಅವರನ್ನು ಅಮಾನತು ಮಾಡಿದ ಉತ್ತರಪ್ರದೇಶ ಸರಕಾರದ ಆದೇಶಕ್ಕೆ ಅಲಹಾಬಾದ್ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಗೋರಖ್‌ಪುರದ ಬಿಆರ್‌ಡಿ ವೈದ್ಯಕೀಯ ಕಾಲೇಜಿನಲ್ಲಿ ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಸುಮಾರು 30 ಮಕ್ಕಳು ಸಾವನ್ನಪ್ಪಿದ ನಂತರ 2017 ರಲ್ಲಿ ಖಾನ್ ಬಂಧಿಸಲ್ಪಟ್ಟಿದ್ದರು.  ಖಾನ್ ಒಂದು ವರ್ಷದ ನಂತರ ಜಾಮೀನಿನ ಮೇಲೆ ಬಿಡುಗಡೆಯಾದರು. ಖಾನ್ ಅವರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ.

ಎರಡು ವರ್ಷಗಳ ನಂತರವೂ ತನ್ನ ವಿರುದ್ಧ ಯಾವುದೇ ತನಿಖೆ ಮುಕ್ತಾಯಗೊಂಡಿಲ್ಲ ಎಂಬ ಆಧಾರದಲ್ಲಿ ಅಮಾನತು ಆದೇಶವನ್ನು ವಿರೋಧಿಸಿ ಖಾನ್  ಸಲ್ಲಿಸಿರುವ   ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಸರಲ್ ಶ್ರೀವಾಸ್ತವ,  2019 ರ ಅಮಾನತಿಗೆ ಸಂಬಂಧಿಸಿದ ತನಿಖೆಯನ್ನು ತಿಂಗಳೊಳಗೆ ಮುಗಿಸಬೇಕೆಂದು ಉತ್ತರಪ್ರದೇಶ ಸರಕಾರಕ್ಕೆ  ಆದೇಶಿಸಿದರು.

ನ್ಯಾಯಾಲಯವು ತನ್ನ ಆದೇಶದಲ್ಲಿ ಖಾನ್ ವಿಚಾರಣೆಗೆ ಸಹಕರಿಸಬೇಕು. ವಿಫಲವಾದರೆ, ಶಿಸ್ತು ಪ್ರಾಧಿಕಾರವು ವಿಚಾರಣೆಯನ್ನು ಮುಕ್ತಾಯಗೊಳಿಸಲು ಮುಂದುವರಿಯಬಹುದು ಎಂದು ಹೇಳಿದೆ.

ಈಗಾಗಲೇ ಅಮಾನತಿನಲ್ಲಿದ್ದಾಗ ಅವರ ವಿರುದ್ಧ ಎರಡನೇ ಅಮಾನತು ಆದೇಶವನ್ನು ಹೊರಡಿಸಲು ರಾಜ್ಯ ಸರಕಾರವನ್ನು ಅನುಮತಿಸುವ ಯಾವುದೇ ನಿಯಮವಿಲ್ಲ ಎಂದು ಖಾನ್ ಪರ ವಕೀಲರು ವಾದಿಸಿದರು.

 ಖಾನ್ ವಿರುದ್ಧದ ತನಿಖಾ ವರದಿಯನ್ನು ಆಗಸ್ಟ್ 27, 2021 ರಂದು ಸಲ್ಲಿಸಲಾಯಿತು ಹಾಗೂ  ಒಂದು ದಿನದ ನಂತರ ಪ್ರತಿಯನ್ನು ಅವರಿಗೆ ಕಳುಹಿಸಲಾಗಿದೆ ಎಂದು ಸರಕಾರದ ಪರವಾಗಿ ಹೆಚ್ಚುವರಿ ಮುಖ್ಯ ಸ್ಥಾಯಿ ಸಲಹೆಗಾರ ಎ.ಕೆ. ಗೋಯೆಲ್ ಅವರು ಹೈಕೋರ್ಟ್‌ಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News