ನಾಳೆ ವಿಚಾರಣೆಗೆ ಹಾಜರಾಗಲು ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಸುರೇಂದ್ರನ್ ರಿಗೆ ಕ್ರೈಂ ಬ್ರಾಂಚ್ ನೋಟಿಸ್

Update: 2021-09-15 07:37 GMT

ಕಾಸರಗೋಡು, ಸೆ.15: ನಾಮಪತ್ರ  ಹಿಂಪಡೆಯಲು ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ರನ್ನು ವಿಚಾರಣೆಗೆ ಒಳಪಡಿಸಲು ಕ್ರೈಂ ಬ್ರಾಂಚ್ ತೀರ್ಮಾನಿಸಿದೆ.  ಸೆ.16ರಂದು ವಿಚಾರಣೆಗೆ ಖುದ್ದು  ಹಾಜರಾಗುವಂತೆ ಸುರೇಂದ್ರನ್ ರಿಗೆ ಕ್ರೈಂ ಬ್ರಾಂಚ್ ನೋಟಿಸ್ ಜಾರಿಗೊಳಿಸಿದೆ.

ಎಪ್ರಿಲ್ ನಲ್ಲಿ ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರದ ಬಿಎಸ್ಪಿ ಅಭ್ಯರ್ಥಿಯಾಗಿದ್ದ ಕೆ.ಸುಂದರ ಅವರನ್ನು ಕಣದಿಂದ ಹಿಂದಕ್ಕೆ ಸರಿಯಲು ಎರಡು ಲಕ್ಷ ರೂ. ನಗದು ಹಾಗೂ ಮೊಬೈಲ್ ಫೋನ್ ನೀಡಿದ್ದಾಗಿ ಇದಲ್ಲದೆ ಇನ್ನಿತರ ಅಮಿಷ ನೀಡಿದ್ದಾಗಿ ಪೊಲೀಸ್ ದೂರು ದಾಖಲಾಗಿದೆ. ಯುವ ಮೋರ್ಚಾ ರಾಜ್ಯ ಮುಖಂಡ ಸುನೀಲ್ ನಾಯ್ಕ್ ಹಾಗೂ ಪಕ್ಷದ ಇತರ ಪ್ರಮುಖರು ಮಾರ್ಚ್ 21ರಂದು ಸುಂದರ ಅವರ ಪೆರ್ಲದಲ್ಲಿರುವ ಮನೆಗೆ ತರೆಳಿ ನಗದು ಹಾಗೂ ಸ್ಮಾರ್ಟ್ ಫೋನ್ ನೀಡಿದ್ದಲ್ಲದೆ, ಸುರೇಂದ್ರನ್ ಗೆದ್ದಲ್ಲಿ ಮಂಗಳೂರಿನಲ್ಲಿ ಬಾರ್ ಲೈಸೆನ್ಸ್ ಹಾಗೂ ಇನ್ನಿತರ ಆಮಿಷವೊಡ್ಡಿದ್ದರು ಎಂದು ಚುನಾವಣೆ ಕಳೆದು ಒಂದು ತಿಂಗಳ ಬಳಿಕ ಸುಂದರ ಬಹಿರಂಗಪಡಿಸಿದ್ದರು. ಈ ಸಂಬಂಧ ಮಂಜೇಶ್ವರದ ಸಿಪಿಎಂ ಅಭ್ಯರ್ಥಿಯಾಗಿದ್ದ ವಿ.ವಿ.ರಮೇಶನ್ ಪೊಲೀಸ್ ದೂರು ಸಲ್ಲಿಸಿದ್ದರು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಬಳಿಕ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ಆದೇಶದಂತೆ ಕೆ.ಸುರೇಂದ್ರನ್ ವಿರುದ್ಧ ಮೊಕದ್ದಮೆ ದಾಖಲಾಗಿತ್ತು. ತನಿಖೆಯನ್ನು ಬದಿಯಡ್ಕ ಪೊಲೀಸರಿಂದ ಕ್ರೈಂ ಬ್ರಾಂಚ್ ಗೆ ವರ್ಗಾಯಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಯುವ ಮೋರ್ಚಾ ರಾಜ್ಯ ಮುಖಂಡ ಸುನೀಲ್ ನಾಯ್ಕ್, ಬಿಜೆಪಿ ಜಿಲ್ಲಾ ಮುಖಂಡರಾದ  ಮಣಿಕಂಠ ರೈ, ವಿ.ಬಾಲಕೃಷ್ಣ ಶೆಟ್ಟಿ ಹಾಗೂ ಇನ್ನಿತರ ಮುಖಂಡರನ್ನು ಕ್ರೈಂ ಬ್ರಾಂಚ್ ತನಿಖೆಗೊಳಪಡಿಸಿತ್ತು. ಇದೀಗ ರಾಜ್ಯಾಧ್ಯಕ್ಷ ಕೆ. ಸುರೇಂದ್ರ ನ್ ರನ್ನು ತನಿಖೆಗೊಳಪಡಿಸಲು ತೀರ್ಮಾನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News