ಸರಕಾರಿ ಪ್ರಾಯೋಜಕತ್ವದಲ್ಲಿ ಬಿಜೆಪಿಯಿಂದ ಧಾರ್ಮಿಕ ಕೇಂದ್ರಗಳ ಧ್ವಂಸ: ಹರೀಶ್ ಕುಮಾರ್ ಆರೋಪ

Update: 2021-09-15 09:59 GMT

ಮಂಗಳೂರು, ಸೆ.15: ಧಾರ್ಮಿಕ ಕೇಂದ್ರಗಳನ್ನು ಸರಕಾರಿ ಪ್ರಾಯೋಜಕತ್ವದಲ್ಲಿ ಧ್ವಂಸಗೊಳಿಸುತ್ತಿರುವ ಬಿಜೆಪಿ ರಾಜ್ಯದ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ. ಈ ರೀತಿಯ ಕ್ರಮವನ್ನು ತಕ್ಷಣ ನಿಲ್ಲಿಸಿ ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಬೇಕು. ಆದ ಘಟನೆಗೆ ಬಿಜೆಪಿ ಜನತೆಯ ಕ್ಷಮೆ ಯಾಚಿಸಬೇಕು ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಒತ್ತಾಯಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದು ಧರ್ಮವನ್ನು ಗುತ್ತಿಗೆ ತೆಗೆದುಕೊಂಡವರಂತೆ ವರ್ತಿಸುತ್ತಿರುವ ಬಿಜೆಪಿ ಹಾಗೂ ಅವರ ಪರಿವಾರದ ಸಂಘಟನೆಗಳು ಪ್ರತಿಭಟನೆಯ ನಾಟಕವಾಡುತ್ತಿದ್ದಾರೆ. ಕೇಂದ್ರ ರಾಜ್ಯ ಎರಡೂ ಕಡೆ ಬಿಜೆಪಿ ನೇತೃತ್ವದ ಸರಕಾರ ಇದೆ. ಹೀಗಿರುವ ಪುರಾತನ ದೇವಾಲಯಗಳನ್ನು ಒಡೆದು ವಿಗ್ರಹಗಳನ್ನು ಕಸದ ರಾಶಿಯಲ್ಲಿ ಎಸೆದಿರುವುದು ಜನರ ಭಾವನೆಗಳಿಗೆ ಅತೀವ ನೋವುಂಟು ಮಾಡಿದೆ.ಈ ಬಗ್ಗೆ ಸರಕಾರದ ಸಚಿವರಾದ ಸಿ.ಟಿ.ರವಿ, ಆರ್.ಅಶೋಕ್ ತಮಗೆ ಏನು ತಿಳಿದಿಲ್ಲ ಎನ್ನುವಂತೆ  ನಟಿಸುತ್ತಿದ್ದಾರೆ ಎಂದವರು ಆರೋಪಿಸಿದ್ದಾರೆ.  

ಮುಖ್ಯಮಂತ್ರಿ ಧಾರ್ಮಿಕ ಕೇಂದ್ರಗಳನ್ನು ಕೆಡಹುವ ಬಗ್ಗೆ ಅವಸರ ಮಾಡಬೇಡಿ ಎಂಬ ಹೇಳಿಕೆ ನೀಡುತ್ತಿದ್ದಾರೆ. ಈಗಾಗಲೇ ಸಾಕಷ್ಟು ಪುರಾತನ ದೇವಾಲಯಗಳನ್ನು ಒಡೆದು ಹಾಕಲಾಗಿದೆ. ಈ ರೀತಿಯ ಕೆಲಸ ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ. ಸುಪ್ರೀಂ ಕೋರ್ಟ್ ನ್ನು ನೆಪವಾಗಿರಿಸಿ ಬಿಜೆಪಿ ಧಾರ್ಮಿಕ ಕೇಂದ್ರಗಳ ಕಟ್ಟಡ ಕೆಡವುತ್ತಿದೆ. ನ್ಯಾಯಾಲಯದ ಆದೇಶ ಪಾಲನೆಯ ಸಂದರ್ಭದಲ್ಲಿ ಸ್ಥಳೀಯವಾಗಿ ಪರ್ಯಾಯ ಕಟ್ಟಡ ನಿರ್ಮಾಣದ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳದೆ, ವಿಗ್ರಹಗಳನ್ನು ಬೀದಿಯಲ್ಲಿ ಎಸೆದಿರುವುದು ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಇದಕ್ಕೆ ಬಿಜೆಪಿ ನೇರ ಹೊಣೆ ಹೊರಬೇಕಾಗಿದೆ ಎಂದು ಹರೀಶ್ ಕುಮಾರ್ ಹೇಳಿದ್ದಾರೆ.

*ದ.ಕ. ಜಿಲ್ಲೆಯಲ್ಲಿ 920 ಕಟ್ಟಡ ಕೆಡವಲು ಗುರಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 920 ಧಾರ್ಮಿಕ ಕೆಂದ್ರಗಳ ಕಟ್ಟಡ ಅಕ್ರಮವಾಗಿ ನಿರ್ಮಾಣವಾಗಿದೆ ಎಂದು ಗುರುತಿಸಲಾಗಿದೆ. ಈಗಾಗಲೇ 356 ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಅಕ್ರಮ ಕಟ್ಟಡ ತೆರವಿಗೆ ಗುರುತಿಸಲಾದ ಧಾರ್ಮಿಕ ಕೇಂದ್ರಗಳಲ್ಲಿ 281 ಮುಸ್ಲಿಂ, 79 ಕ್ರೈಸ್ತ, 17 ಇತರ ಧಾರ್ಮಿಕ ಕೇಂದ್ರಗಳಾಗಿವೆ ಎಂದು ಹರೀಶ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸದಾಶಿವ ಉಳ್ಳಾಲ್, ವಿಶ್ವಾಸ್ ಕುಮಾರ್ ದಾಸ್, ಪ್ರಕಾಶ್ ಸಾಲ್ಯಾನ್, ನೀರಜ್ ಪಾಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News