ಲಾರಿ ಚಾಲಕನ ಕೊಲೆ ಪ್ರಕರಣ : ಆರೋಪಿಗೆ ಜೀವಾವಧಿ ಶಿಕ್ಷೆ
ಮಂಗಳೂರು, ಸೆ.15: ತಮಿಳುನಾಡಿನ ಲಾರಿ ಚಾಲಕ ಸೆಲ್ವಮಣಿ (40) ಎಂಬವರನ್ನು ಕೊಲೆಗೈದ ಮತ್ತೊಂದು ಲಾರಿಯ ಚಾಲಕ ತಮಿಳುನಾಡಿನ ಪ್ಯಾಟ್ರಿಕ್ ಸುರೇಶ್ ಕುಮಾರ್(48) ಎಂಬಾತನಿಗೆ ಮಂಗಳೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಆರ್.ಪಲ್ಲವಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
2018ರ ಮಾ.3ರಂದು ಕೊಲೆ ಪ್ರಕರಣ ನಡೆದಿತ್ತು. ಅಂದರೆ ಲಾರಿ ಚಾಲಕ ಪ್ಯಾಟ್ರಿಕ್ ಸುರೇಶ್ ಕುಮಾರ್ ಮತ್ತು ಸೆಲ್ವಮಣಿ ತಮ್ಮ ಲಾರಿಗಳಲ್ಲಿ ತಮಿಳುನಾಡಿನಿಂದ ಸರಕು ತುಂಬಿಸಿಕೊಂಡು ಮಂಗಳೂರಿಗೆ ಬಂದಿದ್ದರು. ಸರಕು ಖಾಲಿ ಮಾಡಿ ವಾಪಸ್ ಹೋಗುವಾಗ ಬೇರೆ ಸರಕನ್ನು ತಮಿಳುನಾಡಿಗೆ ಕೊಂಡೊಯ್ಯುವ ಸಲುವಾಗಿ ಕಂಕನಾಡಿ ನಗರ ಠಾಣಾ ಪೊಲೀಸ್ ವ್ಯಾಪ್ತಿಯ ಪಡೀಲ್ ಓವರ್ ಬ್ರಿಡ್ಜ್ ಬಳಿಯ ಯಾರ್ಡ್‌ನಲ್ಲಿ ಲಾರಿಗಳನ್ನು ನಿಲ್ಲಿಸಿದ್ದರು. ಮಾ.3ರಂದು ರಾತ್ರಿ 1:05ರ ವೇಳೆಗೆ ಯಾರ್ಡ್‌ನಲ್ಲಿ ಸುರೇಶ್ ಕುಮಾರ್ ಮತ್ತು ಸೆಲ್ವಮಣಿ ನಡುವೆ ಮಾತಿನ ಚಕಮಕಿ ನಡೆದಿದೆ.
ಆರೋಪಿ ಸುರೇಶ್ ಕುಮಾರ್‌ನ ಸಂಬಂಧಿಯನ್ನು ಸೆಲ್ವಮಣಿ ವಿವಾಹವಾಗಿದ್ದ. ಈ ವಿಚಾರವಾಗಿ ವಾಗ್ವಾದ ನಡೆದು ಸುರೇಶ್ ಕುಮಾರ್ ಚೂರಿಯಿಂದ ಸೆಲ್ವಮಣಿಯ ಹೊಟ್ಟೆಗೆ ತಿವಿಯಲು ಮುಂದಾದ. ಆಗ ಸೆಲ್ವಮಣಿಯ ಕೈಗೆ ಗಾಯವಾಯಿತು. ಸ್ವಲ್ಪ ಹೊತ್ತಿನ ಬಳಿಕ ಮತ್ತೊಂದು ಚೂರಿ ತಂದ ಸುರೇಶ್ ಕುಮಾರ್ ಅದರಿಂದ ಸೆಲ್ವಮಣಿಗೆ ತಿವಿದು ಗಂಭೀರವಾಗಿ ಗಾಯಗೊಳಿಸಿದ. ಪರಿಸರದಲ್ಲಿದ್ದ ಇತರ ಲಾರಿಗಳ ಚಾಲಕರು ಸೇರಿ ಸೆಲ್ವಮಣಿಯನ್ನು ಲಾರಿಯಲ್ಲೇ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಸೆಲ್ವಮಣಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸ್‌ಪೆಕ್ಟರ್ ರವಿ ನಾಯ್ಕ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಸಲ್ಲಿಸಿದ್ದರು.
ನ್ಯಾಯಾಧೀಶರು 25 ಮಂದಿ ಸಾಕ್ಷಿಗಳ ವಿಚಾರಣೆ ನಡೆಸಿ ಆರೋಪಿ ತಪ್ಪಿತಸ್ಥನೆಂದು ತೀರ್ಮಾನಿಸಿ ಬುಧವಾರ ಜೀವಾವಧಿ ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿ ತೀರ್ಪು ನೀಡಿದರು. ಅಲ್ಲದೆ ಕೊಲೆಯಾದ ಸೆಲ್ವಮಣಿಯ ಪತ್ನಿಗೆ ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಿದರು.
ಈ ಪ್ರಕರಣದಲ್ಲಿ ವೈಜ್ಞಾನಿಕ ಸಾಕ್ಷಗಳು ಮಹತ್ವದ ಪಾತ್ರ ವಹಿಸಿದ್ದವು. ಪ್ರಾಸಿಕ್ಯೂಷನ್ ಪರವಾಗಿ ಸರಕಾರಿ ಅಭಿಯೋಜಕ ಹರೀಶ್ಚಂದ್ರ ಉದ್ಯಾವರ ವಾದಿಸಿದ್ದಾರೆ.