ಬೆಳ್ತಂಗಡಿಯಲ್ಲಿ 'ತುರಾಯಾ ಸ್ಯಾಟಲೈಟ್ ಫೋನ್' ಸಂಪರ್ಕದ ಬಗ್ಗೆ ಮಾಹಿತಿ ಇಲ್ಲ: ದ.ಕ.ಜಿಲ್ಲಾ ಎಸ್ಪಿ ಸ್ಪಷ್ಟನೆ

Update: 2021-09-15 15:54 GMT
ಋಷಿಕೇಶ್ ಸೋನಾವಣೆ

ಮಂಗಳೂರು, ಸೆ.15: ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ 'ತುರಾಯಾ ಸ್ಯಾಟಲೈಟ್ ಫೋನ್‌' ಮೂಲಕ ವಿದೇಶಕ್ಕೆ ಸಂಪರ್ಕ ಸಾಧಿಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ದ.ಕ.ಜಿಲ್ಲಾ ಎಸ್ಪಿ ಋಷಿಕೇಶ್ ಸೋನಾವಣೆ ಸ್ಪಷ್ಟಪಡಿಸಿದ್ದಾರೆ.

ಕಳೆದೊಂದು ವಾರದಿಂದ ಬೆಳ್ತಂಗಡಿ ಪರಿಸರದಲ್ಲಿ ತುರಾಯಾ ಸ್ಯಾಟಲೈಟ್ ಫೋನ್ ರಿಂಗಣಿಸಿದೆ. ವಿದೇಶಕ್ಕೆ ಸಂಪರ್ಕ ಸಾಧಿಸಲಾಗಿದೆ ಇತ್ಯಾದಿ ಸಂದೇಶ ಹರಿದಾಡಿದ ಹಿನ್ನೆಲೆಯಲ್ಲಿ 'ವಾರ್ತಾಭಾರತಿ' ಜೊತೆ ಮಾತನಾಡಿದ ಎಸ್ಪಿ ಅಂತಹ ಯಾವ ವಿಚಾರವೂ ನನ್ನ ಗಮನಕ್ಕೆ ಬಂದಿಲ್ಲ ಎಂದರು.

ತುರಾಯಾ ಸ್ಯಾಟಲೈಟ್ ಫೋನ್ ಬಳಕೆಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಆದಾಗ್ಯೂ ಬೆಳ್ತಂಗಡಿ ತಾಲೂಕು ಅಲ್ಲದೆ ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ತುರಾಯಾ ಸ್ಯಾಟಲೈಟ್ ಫೋನ್ ನೆಟ್ವರ್ಕ್ ಟ್ರೇಸ್ ಆಗಿರುವ ಬಗ್ಗೆ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ ಎಂಬ ವದಂತಿ ಇದೆ.

ಕರಾವಳಿ ಭಾಗದಲ್ಲಿ ಶಂಕಿತ ಉಗ್ರರು ನುಸುಳಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆಯು ಹೈ ಅಲರ್ಟ್ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ. ಆದರೆ ಆ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ಅಧಿಕೃತವಾಗಿ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News