ಸೆ.17ರ ಲಸಿಕಾ ಮೇಳದ ಸದುಪಯೋಗಕ್ಕೆ ದ.ಕ. ಜಿಲ್ಲಾಧಿಕಾರಿ ಕರೆ

Update: 2021-09-15 16:50 GMT

ಮಂಗಳೂರು ಸೆ.15:: ಸರಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಸೆ.17ರಂದು ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ನಡೆಯುವ ಬೃಹತ್ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು ದ.ಕ.ಜಿಲ್ಲಾಧಿಕಾರಿ ಕರೆ ನೀಡಿದ್ದಾರೆ.

ಸುಮಾರು 533 ಕೇಂದ್ರಗಳಲ್ಲಿ ಲಸಿಕೆಯನ್ನು ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲೆಯ ಎಲ್ಲಾ ಗ್ರಾಪಂ ಅಧ್ಯಕ್ಷರು, ಪಿಡಿಒ, ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಗ್ರಾಮಲೆಕ್ಕಿಗರ ಜೊತೆ ಬುಧವಾರ ನಡೆಸಿದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.

ನಗರ ಹಾಗೂ ಗ್ರಾಮೀಣ ಭಾಗದ ಪ್ರತಿ ಮನೆಗಳಿಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಬಿಲ್ ಕಲೆಕ್ಟರ್ ಮತ್ತು ಪಿಡಿಒ ಅಧಿಕಾರಿಗಳು ಭೇಟಿ ನೀಡಿ ಇಲ್ಲಿಯವರೆಗೂ ಲಸಿಕೆ ಪಡೆಯದಿರುವ 18 ವರ್ಷ ಮೆಲ್ಪಟ್ಟವರನ್ನು ಗುರುತಿಸಿ ಪಟ್ಟಿಯನ್ನು ಸಿದ್ದಪಡಿಸಿಕೊಳ್ಳುವಂತೆ ಸೂಚಿಸಿದ ಡಿಸಿ ಅವರಿಗೆ ಲಸಿಕೆ ಪಡೆಯಲು ಸ್ಥಳ ಹಾಗೂ ದಿನಾಂಕ ಇರುವ ಚೀಟಿಯನ್ನು ವಿತರಿಸಿ ಲಸಿಕೆ ತೆಗೆದುಕೊಳ್ಳುವಂತೆ ಮಾಡಬೇಕು ಎಂದರು.

ವಿಶೇಷ ಚೇತನರು ಮತ್ತು ಅಶಕ್ತರನ್ನು ಗುರುತಿಸಿ ಅವರಿರುವ ಸ್ಥಳಕ್ಕೆ ಹೋಗಿ ಲಸಿಕೆ ನೀಡಬಹುದು ಅಥವಾ ಅವರನ್ನು ವಾಹನದ ಮೂಲಕ ಲಸಿಕಾ ಕೇಂದ್ರಕ್ಕೆ ಕರೆತಂದು ಲಸಿಕೆ ನೀಡಬಹುದು. ಲಸಿಕೆ ನೀಡಲು ಸರಕಾರಿ ಶಾಲೆಗಳು, ಸಮುದಾಯ ಭವನ, ಅಂಗನವಾಡಿ ಕೇಂದ್ರಗಳು ಹಾಗೂ ಇತರೆ ಸರಕಾರಿ ಕಟ್ಟಡಗಳನ್ನು ಲಸಿಕಾ ಕೇಂದ್ರಗಳನ್ನಾಗಿ ಬಳಸಿಕೊಂಡು ಲಸಿಕೆ ನೀಡಬೇಕು ಎಂದರು.

ಜಿಪಂ ಸಿಇಒ ಡಾ. ಕುಮಾರ್ ಮಾತನಾಡಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ 40,000, ಮೂಡುಬಿದಿರೆಗೆ 10,000, ಮುಲ್ಕಿಗೆ 10,000, ಉಳ್ಳಾಲಕ್ಕೆ 20,000, ಬಂಟ್ವಾಳಕ್ಕೆ 20,000, ಬೆಳ್ತಂಗಡಿಗೆ20,000, ಪುತ್ತೂರಿಗೆ 20,000, ಸುಳ್ಯಕ್ಕೆ 10,000 ಲಸಿಕೆ ನೀಡುವ ಗುರಿಯನ್ನು ನಿಗಧಿಪಡಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News