ಸಿಎ ಸಾಧಕಿ ರುತ್ ಡಿಸಿಲ್ವಗೆ ಸಂತ ತೆರೇಸಾ ಶಾಲೆಯಲ್ಲಿ ಸನ್ಮಾನ

Update: 2021-09-15 16:58 GMT

ಮಂಗಳೂರು, ಸೆ.15: ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಸಂಸ್ಥೆಯು(ಐಸಿಎಐ) ನಡೆಸಿದ ರಾಷ್ಟ್ರಮಟ್ಟದ ಸಿ.ಎ. ಪರೀಕ್ಷೆಯಲ್ಲಿ ಮೊದಲ ಸ್ಥಾನವನ್ನು ಗಳಿಸಿದ ನಗರದ ಸಂತ ತೆರೇಸಾ ಶಾಲೆಯ ಹಳೆ ವಿದ್ಯಾರ್ಥಿನಿ ರುತ್ ಕ್ಲ್ಯಾರ್ ಡಿಸಿಲ್ವ ಅವರನ್ನು ಬುಧವಾರ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.

ಬೆಥನಿ ಸಂಸ್ಥೆಯ ಸಂಸ್ಥಾಪಕ ಆರ್.ಎಫ್.ಸಿ. ಮಸ್ಕರೇನಸ್ ಅವರ ಮೌಲ್ಯ ಮತ್ತು ದೂರದೃಷ್ಠಿತ್ವವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಒಬ್ಬ ಉತ್ತಮ ವಿದ್ಯಾರ್ಥಿನಿಯಾಗಿ ರೂತ್ ಕ್ಲೆರ್ ಡಿಸಿಲ್ವ ಬೆಳೆದಿದ್ದಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ಶಾಲೆಯಲ್ಲಿರು ವಾಗಲೇ ಕಲಿಕೆ, ಕೀಬೋರ್ಡ್, ಸಂಗೀತ ಮತ್ತು ಕ್ರೀಡೆಯಲ್ಲಿಯೂ ರೂತ್ ಮುಂಚೂಣಿಯಲ್ಲಿದ್ದರು ಎಂದು ಬೆಥನಿ ಎಜುಕೇಶನಲ್ ಸೊಸೈಟಿಯ ಉಪಾಧ್ಯಕ್ಷ ಭ.ಲಿಲ್ಲೀಸ್, ಬೆಥನಿ ಸಂಸ್ಥೆಯ ಕಾರ್ಯದರ್ಶಿ ಭ. ಮಾರಿಯೆಟ್, ಬೆಥನಿ ಎಜುಕೇಶನಲ್ ಸೊಸೈಟಿಯ ಲೆಕ್ಕಪರಿಶೋಧಕ ರುಡಾಲ್ಫ್ ರೊಡ್ರಿಗಸ್ ಕೊಂಡಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರೂತ್ ನನ್ನ ಈ ಸಾಧನೆಗೆ ನನ್ನ ಶಾಲೆ, ಶಿಕ್ಷಕರು, ನನ್ನ ತಂದೆ, ತಾಯಿ ನನಗೆ ಸ್ಫೂರ್ತಿ ಎಂದರು.
ಬೆಥನಿ ಸಂಸ್ಥೆಯ ಖಜಾಂಚಿ ಭ .ರೋಸ್ಲಿಟ, ಬೆಥನಿ ಮಾತೃಸಂಸ್ಥೆಯ ಸುಪೀರಿಯರ್ ಭ .ಅನಿತಾ ಶಾಂತಿ, ಶಾಲಾ ಪ್ರಾಂಶುಪಾಲೆ ಭ.ಲೂರ್ಡ್ಸ್, ಶಾಲೆಯ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಶೆರ್ಲಿನ್ ರೆಬಿಂಬಸ್, ಫೋರ್ವಿಂಡ್ಸ್ ಸಂಸ್ಥೆಯ ನಿರ್ದೇಶಕ ಇ. ಫೆರ್ನಾಂಡಿಸ್, ರೂತ್ ಅವರ ಹೆತ್ತವರು, ಶಾಲೆಯ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News