ಅಭಿಯೋಜಕರನ್ನು ವಜಾಗೊಳಿಸಿದ ಪ್ರಧಾನಿ: ಹೈಟಿಯ ಬಿಕ್ಕಟ್ಟು ಉಲ್ಬಣ

Update: 2021-09-15 17:52 GMT

 ಪೋರ್ಟ್ ಒ-ಪ್ರಿನ್ಸ್, ಸೆ.15: ಹೈಟಿಯ ಮುಖ್ಯ ಸರಕಾರಿ ಅಭಿಯೋಜಕರನ್ನು ಪ್ರಧಾನಿ ಆರಿಯಲ್ ಹೆನ್ರೀ ಮಂಗಳವಾರ ವಜಾಗೊಳಿಸಿದ್ದು ಇದರೊಂದಿಗೆ ಹೈಟಿಯ ರಾಜಕೀಯ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿದೆ.

ಹೈಟಿ ಅಧ್ಯಕ್ಷರಾಗಿದ್ದ ಜೊವೆನೆಲ್ ಮೋಯಿಸ್ರನ್ನು ಜುಲೈ 7ರಂದು ಹತ್ಯೆ ಮಾಡಲಾಗಿದ್ದು ಈ ಹತ್ಯೆಯಲ್ಲಿ ಈಗಿನ ಪ್ರಧಾನಿ ಹೆನ್ರೀ ಕೂಡಾ ಆರೋಪಿ ಎಂದು ಸರಕಾರಿ ಅಭಿಯೋಜಕ ಬೆಡ್ಫೋರ್ಡ್ ಕ್ಲಾಡ್ ಘೋಷಿಸಿದ್ದರು. ಮೋಯಿಸ್ ಅವರ ಹತ್ಯೆಯ ದಿನ , ಪ್ರಧಾನ ಸಂಚುಕೋರ ಎನ್ನಲಾದ ವ್ಯಕ್ತಿಯೊಂದಿಗೆ ಹೆನ್ರೀ 2 ಬಾರಿ ಸಂಭಾಷಣೆ ನಡೆಸಿರುವ ದಾಖಲೆ ಲಭಿಸಿದೆ. ಆದ್ದರಿಂದ ಪ್ರಧಾನಿ ಹುದ್ದೆಯಿಂದ ಹೆನ್ರೀಯನ್ನು ಬದಲಿಸುವಂತೆ ಮೋಯಿಸ್ ಹತ್ಯೆ ತನಿಖೆ ನಡೆಸುತ್ತಿರುವ ನ್ಯಾಯಾಧೀಶರಿಗೆ ಸೂಚಿಸಿದ್ದರು. ಅಲ್ಲದೆ, ಹೆನ್ರೀ ದೇಶಬಿಟ್ಟು ತೆರಳಲು ಆಸ್ಪದ ನೀಡಬಾರದು ಎಂದು ವಲಸೆ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.

ಈ ಸೂಚನೆಯ ಬಳಿಕ ಅಭಿಯೋಜಕರನ್ನೇ ಪ್ರಧಾನಿ ವಜಾಗೊಳಿಸಿದ್ದಾರೆ. ನಿಮ್ಮ ಹುದ್ದೆಯನ್ನು ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ ಎಂದು ನಿಮಗೆ ತಿಳಿಸಲು ನನಗೆ ಸಂತೋಷವಾಗುತ್ತಿದೆ’ ಎಂದು ಸಾರ್ವಜನಿಕವಾಗಿ ಬಿಡುಗಡೆಗೊಳಿಸಿದ ಸರಕಾರಿ ಆದೇಶದಲ್ಲಿ ಕ್ಲಾಡ್ರನ್ನುದ್ದೇಶಿಸಿ ಪ್ರಧಾನಿ ಹೇಳಿದ್ದಾರೆ.

ಹತ್ಯೆಯಾಗುವ ಕೆಲ ದಿನಗಳ ಮೊದಲೇ ಹೆನ್ರಿಯನ್ನು ತಮ್ಮ ಉತ್ತರಾಧಿಕಾರಿ ಎಂದು ಮೋಯಿಸ್ ಘೋಷಿಸಿದ್ದರು. ದೇಶದಲ್ಲಿ ಹದಗೆಟ್ಟಿರುವ ಭದ್ರತಾ ಸ್ಥಿತಿಯನ್ನು ಸುಧಾರಿಸಿ, ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ಸಾರ್ವತ್ರಿಕ ಚುನಾವಣೆಯನ್ನು ನಡೆಸುವುದಾಗಿ ಅಧಿಕಾರ ಸ್ವೀಕರಿಸಿದೊಡನೆ ಹೆನ್ರೀ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News