ವಿದೇಶಿ ಪಡೆಗಳು ಲಿಬಿಯಾ ಬಿಟ್ಟು ತೆರಳಲಿ : ಈಜಿಪ್ಟ್ ಆಗ್ರಹ

Update: 2021-09-15 17:53 GMT

ಕೈರೊ, ಸೆ.15: ಲಿಬಿಯಾದ ರಾಷ್ಟ್ರೀಯ ಸಂಸ್ಥೆಗಳ ಏಕತೆಯ ದೃಷ್ಟಿಯಿಂದ ಆ ದೇಶದಲ್ಲಿರುವ ವಿದೇಶಿ ಪಡೆಗಳನ್ನು ಮತ್ತು ಬಾಡಿಗೆ ಸೈನಿಕರನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್ಸಿಸಿ ಪುನರುಚ್ಚರಿಸಿದ್ದಾರೆ.

 ಕೈರೊಗೆ ಭೇಟಿ ನೀಡಿರುವ ಲಿಬಿಯಾದ ಉನ್ನತ ಮಟ್ಟದ ನಿಯೋಗದೊಂದಿಗೆ ಸಭೆ ನಡೆಸಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ. ಲಿಬಿಯಾದ ರಾಷ್ಟ್ರೀಯ ಸೇನೆಯ ಕಮಾಂಡರ್ ಖಲೀಫಾ ಹಫ್ತಾರ್, ಸಂಸತ್ತಿನ ಸ್ಪೀಕರ್ ಅಖಿಲ ಸಾಲೆಹ್ ಅವರ ನೇತೃತ್ವದ ನಿಯೋಗದ ಜತೆಗಿನ ಸಭೆಯಲ್ಲಿ ಲಿಬಿಯಾದಲ್ಲಿ ಭದ್ರತೆ ಮತ್ತು ಸ್ಥಿರತೆಯ ಸ್ಥಾಪನೆ ಮತ್ತು ದೇಶದ ಸಾರ್ವಭೌಮತೆ ಮತ್ತು ಏಕತೆಯ ಸಂರಕ್ಷಣೆಯ ವಿಷಯಕ್ಕೆ ಆದ್ಯತೆ ನೀಡಲಾಗಿದ್ದು ಈಜಿಪ್ಟ್ನ ಗುಪ್ತಚರ ವಿಭಾಗದ ಮುಖ್ಯಸ್ಥ ಅಬ್ಬಾಸ್ ಕಮೆಲ್ ಸಭೆಯಲ್ಲಿ ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

 ಲಿಬಿಯಾದ ಜನರ ಹಿತಾಸಕ್ತಿಗೆ ವಿರುದ್ಧವಾದ, ತಮ್ಮ ಹಿತಾಸಕ್ತಿಗೆ ಪೂರಕವಾದ ಅಜೆಂಡಾಗಳನ್ನು ಲಿಬಿಯಾದಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ವಿದೇಶೀ ಶಕ್ತಿಗಳನ್ನು ತಡೆಯುವ, ಲಿಬಿಯಾದಲ್ಲಿರುವ ವಿದೇಶಿ ಪಡೆಗಳು ಹಾಗೂ ಬಾಡಿಗೆ ಸೈನಿಕರನ್ನು ಹೊರದೂಡುವ ತನ್ನ ಪ್ರಯತ್ನವನ್ನು ಈಜಿಪ್ಟ್ ಮುಂದುವರಿಸಲಿದೆ ಎಂದು ಎಲ್ಸಿಸಿ ಹೇಳಿದರು. ಲಿಬಿಯಾದ ಇತ್ತೀಚಿನ ಬೆಳವಣಿಗೆ ಹಾಗೂ ಈಜಿಪ್ಟ್-ಲಿಬಿಯಾ ದ್ವಿಪಕ್ಷೀಯ ಸಹಕಾರ ಸಂಬಂಧ ಸುಧಾರಣೆ ವರ್ಧಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಈಜಿಪ್ಟ್ ಅಧ್ಯಕ್ಷರ ವಕ್ತಾರ ಬಸಾಮ್ ರೇಡಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News