ಕರಾವಳಿಯಲ್ಲಿ ಕಲಾ ಚಟುವಟಿಕೆ ಆರಂಭಿಸಲು ಅನುಮತಿಸಲು ಕಲಾವಿದರ ಒತ್ತಾಯ

Update: 2021-09-16 09:31 GMT

ಮಂಗಳೂರು, ಸೆ.16: ಕಳೆದ 2 ವರ್ಷಗಳಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದಲ್ಲಿ ತುಳು ನಾಟಕ, ಸಿನೆಮಾ, ಯಕ್ಷಗಾನ, ಸಂಗೀತ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಿ, ಸುಮಾರು 10 ಸಾವಿರಕ್ಕೂ ಅಧಿಕ ಕಲಾವಿದರು ಉದ್ಯೋಗವಿಲ್ಲದೆ ಕಂಗಾಲಾಗಿದ್ದಾರೆ. ಹೀಗಾಗಿ ಕರಾವಳಿ ಭಾಗದಲ್ಲಿ ಕಲಾವಿದರ ಬದುಕಿಗೆ ಆಸರೆಯಾಗಲು ತತ್‌ಕ್ಷಣದಿಂದ ಕಲಾ ಚಟುವಟಿಕೆ ಆರಂಭಿಸಲು ಸರಕಾರ ಅನುಮತಿ ನೀಡಬೇಕು ಎಂದು ತುಳು ಸಿನೆಮಾ, ರಂಗಭೂಮಿ ಕಲಾವಿದರು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾತನಾಡಿದ ರಂಗಭೂಮಿ ನಟ, ಚಲನಚಿತ್ರ ನಿರ್ದೇಶಕ ದೇವದಾಸ್ ಕಾಪಿಕಾಡ್, ಸದ್ಯ ರಾಜಕೀಯ ಸೇರಿದಂತೆ ಎಲ್ಲಾ ಚಟುವಟಿಕೆಗಳು ಆರಂಭವಾಗಿವೆ. ಆದರೆ, ನಾಟಕ, ಯಕ್ಷಗಾನ, ಸಿನೆಮಾ, ಸಂಗೀತಕ್ಕೆ ಮಾತ್ರ ಅವಕಾಶವೇ ದೊರೆತಿಲ್ಲ. ಪರಿಣಾಮವಾಗಿ ಕಳೆದ 2 ವರ್ಷಗಳಿಂದ ಕರಾವಳಿ ಭಾಗದ ಸಾವಿರಾರು ಕಲಾವಿದರು ಸಂಕಷ್ಟದ ಬದುಕು ನಡೆಸುತ್ತಿದ್ದಾರೆ. ಸರಕಾರ ಕಲಾವಿದರ ಪರವಾಗಿ ಸ್ಪಂದಿಸಬೇಕೆಂದು ಹೇಳಿದರು.

ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್‌ಬೈಲು ಮಾತನಾಡಿ, ಸರಕಾರದ ಕಿಟ್ ಅಥವಾ ನೆರವು ನಮಗೆ ಬೇಡ. ನಾವು ಸ್ವಾಭಿಮಾನಿಗಳು ನಮಗೆ ಬದುಕಲು ಅವಕಾಶ ನೀಡಿ. ಸಿಂಗಲ್ ಥಿಯೇಟರ್‌ಗಳೆಲ್ಲ ಮುಚ್ಚುವ ಪರಿಸ್ಥಿತಿ ಇದ್ದು, ತುಳು ಸಿನೆಮಾ ಕಲಾವಿದರು ಮುಂದೇನು ಎಂಬ ಪರಿಸ್ಥಿಯಲ್ಲಿದ್ದಾರೆ. ಕಲಾವಿದರ ಹಾಗೂ ಕಲಾ ಲೋಕದ ಪರವಾಗಿ ಭಾಷಣ ಮಾಡುವ ಜನಪ್ರತಿನಿಧಿಗಳು ಈಗ ಕಲಾ ಚಟುವಟಿಕೆಯನ್ನು ಕೊರೋನ ನಿಯಮಾವಳಿಯಡಿ ನಡೆಸಲು ಅವಕಾಶ ಮಾಡಿಕೊಡಲಿ ಎಂದರು.

ಚಲನಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ, 12 ತುಳು ಸಿನೆಮಾಗಳು ರಿಲೀಸ್‌ಗಾಗಿ ಕಾಯುತ್ತಿವೆ. ಶೇ.50 ಸೀಟು ನಿಯಮದಿಂದ ಪ್ರೇಕ್ಷಕರೇ ಥಿಯೇಟರ್‌ಗೆ ಬರುತ್ತಿಲ್ಲ. ಹೀಗಾಗಿ ಸಿನೆಮಾ ಮಾಡಿದವರು ಆತಂಕದಲ್ಲಿದ್ದಾರೆ. ಜತೆಗೆ ಸಿನೆಮಾ, ನಾಟಕ ನಂಬಿರುವ ಕಲಾವಿದರು ಬೀದಿಗೆ ಬೀಳುವ ಪರಿಸ್ಥಿತಿ ಇದೆ. ಸರಕಾರ ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ನಿರ್ಮಾಪಕ, ತುಳುನಾಟಕ ಕಲಾವಿದರ ಒಕ್ಕೂಟ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ ಮಾತನಾಡಿ, 40 ವೃತ್ತಿಪರ ನಾಟಕಗಳ ಕಲಾವಿದರಿಗೆ ಕಳೆದ 2 ವರ್ಷದಿಂದ ಪ್ರದರ್ಶನವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. 45 ವರ್ಷದಿಂದ ಕಲಾ ಸೇವೆ ಮಾಡಿದವರು ಇಂದು ಆತಂಕದಲ್ಲಿದ್ದಾರೆ. ನಾಟಕ ಕಲಾವಿದರ ಜತೆಗೆ ಅವರನ್ನು ನಂಬಿಕೊಂಡಿರುವ ಕುಟುಂಬಗಳು ಸಂಕಷ್ಟದಲ್ಲಿ ವೆಂದರು.

ಸುದ್ದಿಗೋಷ್ಠಿಯಲ್ಲಿ ಮೋಹನ್ ಕೊಪ್ಪಳ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News