ರಸ್ತೆ ಬದಿ ತ್ಯಾಜ್ಯ ಎಸೆದ ವ್ಯಕ್ತಿಗೆ ಪುದು ಗ್ರಾಪಂನಿಂದ 3 ಸಾವಿರ ರೂ. ದಂಡ

Update: 2021-09-16 11:09 GMT

ಬಂಟ್ವಾಳ, ಸೆ.16: ತಾಲೂಕಿನ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ತ್ಯಾಜ್ಯ ಎಸೆದ ವ್ಯಕ್ತಿಯೊಬ್ಬರಿಗೆ ಪಂಚಾಯತ್ ನಿಂದ 3 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

ಇತ್ತೀಚಿಗೆ ವ್ಯಕ್ತಿಯೊಬ್ಬರು ಮಾರುತಿ ಓಮ್ನಿ ಕಾರಿನಲ್ಲಿ ತ್ಯಾಜ್ಯ ತಂದು ಪುದು ಗ್ರಾಮದ ಹತ್ತನೇ ಮೈಲುಕಲ್ಲು ಎಂಬಲ್ಲಿ ಎಸೆಯುವುದನ್ನು ಗಮನಿಸಿದ ಸ್ಥಳೀಯರು ಕಾರಿನ ನಂಬರ್ ತೆಗೆದು ಪಂಚಾಯತ್ ಅಧ್ಯಕ್ಷರಿಗೆ ನೀಡಿದ್ದರು. 

ಕಾರಿನ ನಂಬರ್ ಅನ್ನು ಬಂಟ್ವಾಳ ಪೊಲೀಸ್ ಠಾಣೆಗೆ ನೀಡಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದರು. ಅದರಂತೆ ಪೊಲೀಸರು ಕಾರಿನ ನಂಬರ್ ಆಧಾರದಲ್ಲಿ ವ್ಯಕ್ತಿಯ ವಿಳಾಸ ಪತ್ತೆ ಹಚ್ಚಿ ಠಾಣೆಗೆ ಕರೆಸಿದ್ದರು. ಬಳಿಕ ಪೊಲೀಸರ ಸೂಚನೆಯಂತೆ ವ್ಯಕ್ತಿ ಪುದು ಗ್ರಾಮ ಪಂಚಾಯತ್ ಗೆ ತೆರಳಿ 3 ಸಾವಿರ ರೂಪಾಯಿ ದಂಡ ಪಾವತಿಸಿದ್ದಾರೆ. 
 
ಈ ಬಗ್ಗೆ ಹೇಳಿಕೆ ನೀಡಿರುವ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಗ್ರಾಮದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ, ಒಳ ರಸ್ತೆಗಳು ಹಾಗೂ ಇತರ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವವರನ್ನು ಗುರುತಿಸಿ ಅವರ ವಿವರ ನೀಡುವಂತೆ ಗ್ರಾಮದ ಎಲ್ಲಾ ಅಂಗಡಿಗಳಲ್ಲಿ ಹಾಗೂ ಸ್ಥಳೀಯರಲ್ಲಿ ಮನವಿ ಮಾಡಲಾಗಿತ್ತು. ಅದರಂತೆ ರಸ್ತೆ ಬದಿ ತ್ಯಾಜ್ಯ ಎಸೆದ ಓಮ್ನಿ ಕಾರಿನ ನಂಬರ್ ಅನ್ನು ಸ್ಥಳೀಯ ಒಬ್ಬರು ನೀಡಿದ್ದರು. ಅದರಂತೆ ಕಾರಿನ ಮಾಲಕನನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದರು. 

ತ್ಯಾಜ್ಯ ಎಸೆದ ಓಮ್ನಿ ಮಾಲಕ ಬಂಟ್ವಾಳ ಬೈಪಾಸ್ ರಸ್ತೆಯಲ್ಲಿ ಅಂಗಡಿಯನ್ನು ಹೊಂದಿದ್ದು ಮಂಗಳೂರು ಕಡೆಗೆ ತೆರಳುವಾಗ ಪುದು ಗ್ರಾಮ ವ್ಯಾಪ್ತಿಯಲ್ಲಿ ತ್ಯಾಜ್ಯ ಎಸೆದಿದ್ದಾರೆ‌. ಗ್ರಾಮದ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವವರಿಗೆ 3 ರಿಂದ 5 ಸಾವಿರ ರೂಪಾಯಿ ವರೆಗೆ ದಂಡ ವಿಧಿಸಲು ಪಂಚಾಯತ್ ನಿರ್ಣಯ ಮಾಡಿದೆ ಎಂದು ಅವರು ತಿಳಿಸಿದರು. 

ಪುದು ಗ್ರಾಮದ ವ್ಯಾಪ್ತಿಯಲ್ಲಿ ಪಂಚಾಯತ್ ನಿಂದ ಈ ಹಿಂದೆ ಮನೆ ಮನೆಗೆ ವಾಹನ ತೆರಳಿ ತ್ಯಾಜ್ಯ ಸಂಗ್ರಹಿಸಲಾಗುತ್ತಿತ್ತು. ಬಳಿಕ ಕೆಲವು ಸಮಸ್ಯೆಗಳ ಕಾರಣದಿಂದ ತ್ಯಾಜ್ಯ ಸಂಗ್ರಹ ಕೆಲವು ಸಮಯ ಸ್ಥಗಿತಗೊಂಡಿತ್ತು. ಈ ಸಮಯದಲ್ಲಿ ಕೆಲವರು ಗ್ರಾಮದ ವಿವಿಧೆಡೆ ತ್ಯಾಜ್ಯ ಎಸೆಯುತ್ತಿದ್ದರು‌. ಇದನ್ನು ಗಂಭೀರವಾಗಿ ಪರಿಗಣಿಸಿದ ಗ್ರಾಮ ಪಂಚಾಯತ್ ಆಡಳಿತ ಇದೀಗ ಸಮಗ್ರ ತ್ಯಾಜ್ಯ ಸಂಗ್ರಹಕ್ಕೆ ಸೂಕ್ತ ವ್ಯವಸ್ಥೆ ಮಾಡಿದೆ ಎಂದು ಹೇಳಿದರು. 

ಪ್ರಸಕ್ತ ಪಂಚಾಯತ್ ನಿಂದ ಎರಡು ಪಿಕಪ್ ವಾಹನಗಳನ್ನು ಪ್ರತೀ ಮನೆ ಮನೆಗೆ ಕಳುಹಿಸಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ವಾರದಲ್ಲಿ 6 ದಿನ ಹಸಿ ತ್ಯಾಜ್ಯ ಸಂಗ್ರಹಿಸಿದರೆ ಗುರುವಾರದಂದು ಒಣ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಗ್ರಾಮಸ್ಥರು ತ್ಯಾಜ್ಯವನ್ನು ವಾಹನಕ್ಕೆ ನೀಡಬೇಕು. ಗ್ರಾಮದ ಯಾವುದೇ ಜನರು ಅಥವಾ ಗ್ರಾಮದ ಹೊರಗಿನ ಜನರು ಗ್ರಾಮದ ರಸ್ತೆ ಬದಿ ಅಥವಾ ಇತರ ಯಾವುದೇ ಸ್ಥಳದಲ್ಲಿ ತ್ಯಾಜ್ಯ ಎಸೆದರೆ ಅವರಿಗೆ 3ರಿಂದ 5 ಸಾವಿರ ರೂಪಾಯಿ ದಂಢ ವಿಧಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. 
 
ಗ್ರಾಮದಲ್ಲಿ ತ್ಯಾಜ್ಯ ಸಂಸ್ಕರಣ ಘಟಕದ ನಿರ್ಮಾಣಕ್ಕೆ ಗ್ರಾಮದಲ್ಲಿ ಜಾಗ ಗುರುತಿಸಲಾಗಿದ್ದು ಶೀಘ್ರದಲ್ಲೇ ಘಟಕ ಕಾರ್ಯಾಚರಿಸಲಿದೆ. ಅಲ್ಲದೆ ಗ್ರಾಮದ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚ್ಚಲು ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಸುವ ಕೆಲಸವನ್ನು ಗ್ರಾಮ ಪಂಚಾಯತ್ ನಿಂದ ನಡೆಯುತ್ತಿದೆ ಎಂದು ಅವರು ವಿವರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News