ಪ್ರಥಮ ಪಿಯು ಕಾಲೇಜು ಭೌತಿಕ ತರಗತಿಗಳು ಆರಂಭ

Update: 2021-09-16 11:57 GMT

ಮಂಗಳೂರು, ಸೆ.16: ಪ್ರೌಢ ಶಿಕ್ಷಣವನ್ನು ಮುಗಿಸಿ ಕಾಲೇಜು ಮೆಟ್ಟಿಲು ಹತ್ತುವುದು ವಿದ್ಯಾರ್ಥಿಗಳ ಪಾಲಿಗೊಂದು ಹೊಸ ಅನುಭವ, ಹುರುಪು. ಆದರೆ ಕೊರೋನ ಆತಂಕವು ಕಳೆದೆರಡು ವರ್ಷಗಳಿಂದ ಮಕ್ಕಳ ಈ ಹುರುಪನ್ನು ಕಸಿದಿತ್ತು. ಆನ್‌ಲೈನ್ ತರಗತಿಗಳು ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ಆತಂಕದ ಛಾಯೆಯೆನ್ನು ಎಳೆದಿದೆ.

ಈ ನಡುವೆ ಇದೀಗ ಹಂತಹಂತವಾಗಿ ಶಾಲಾ ಕಾಲೇಜುಗಳು ಆರಂಭಿಸಲು ರಾಜ್ಯ ಸರಕಾರ ಸೂಚನೆ ನೀಡಿರುವಂತೆಯೇ ಇಂದಿನಿಂದ ಪ್ರಥಮ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭಗೊಂಡಿವೆ. ದ.ಕ. ಜಿಲ್ಲೆಯಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಹುರುಪಿನಿಂದ ಕಾಲೇಜಿನತ್ತ ಹೆಜ್ಜೆ ಹಾಕಿದ್ದಾರೆ. ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಶಾಲಾ ಕಾಲೇಜುಗಳಲ್ಲಿ ಭೌತಿಕ ತರಗತಿಗಳನ್ನು ಆರಂಭಿಸಲು ರಾಜ್ಯ ಸರಕಾರ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಈಗಾಗಲೇ ಎಸೆಸೆಲ್ಸಿ, ದ್ವಿತೀಯ ಪಿಯುಸಿ ತರಗತಿಗಳು ಆರಂಭಗೊಂಡಿವೆ.

ದ್ವಿತೀಯ ಪಿಯುನ ಭೌತಿಕ ತರಗತಿಗಳು ಆರಂಭವಾಗಿದ್ದು ದಿನದಿಂದ ದಿನಕ್ಕೆ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚುತ್ತಿದೆ. ಅವರಿಗೆ ಪೂರ್ವಾಹ್ನದಲ್ಲಿ ತರಗತಿಗಳು ಸಾಗಿದರೆ ಅಪರಾಹ್ನದ ಬಳಿಕ ಪ್ರಥಮ ಪಿಯುಗೂ ತರಗತಿ ಆರಂಭವಾಗಿದ್ದು ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿ ಮೊದಲ ದಿನವೇ ಉತ್ತಮ ಸ್ಪಂಧನೆ ದೊರಕಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವ ಸಾಧ್ಯತೆಯಿದೆ ಎಂದು ಕಾಲೇಜುಗಳ ಪ್ರಾಂಶುಪಾಲರು ಮಾಹಿತಿ ಹಂಚಿಕೊಂಡಿದ್ದಾರೆ.ಈಗಾಗಲೇ ದ್ವಿತೀಯ ಪಿಯುಗೆ 18,172 ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದಾರೆ. ಇದರಲ್ಲಿ 234 ಮಂದಿ ಕೇರಳದ ವಿದ್ಯಾರ್ಥಿಗಳು ಹಾಗೂ 2811 ಮಂದಿ ಹಾಸ್ಟೆಲ್‌ನಲ್ಲಿ ನಿಂತು ಕಾಲೇಜಿಗೆ ಬಂದಿದ್ದಾರೆ. ಈ ಮೂಲಕ 21,217 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

ಇದೇ ರೀತಿಯಲ್ಲಿ ಗುರುವಾರ ಜಿಲ್ಲೆಯಲ್ಲಿ ಪ್ರಥಮ ಪಿಯುಸಿಗೆ 11,633 ವಿದ್ಯಾರ್ಥಿಗಳು ಹಾಜರಾಗಿದ್ದು, 91 ಮಂದಿ ಕೇರಳದ ವಿದ್ಯಾರ್ಥಿಗಳು 1,337 ಮಂದಿ ಹಾಸ್ಟೆಲ್‌ನಿಂದ ತರಗತಿಗೆ ಬಂದಿದ್ದಾರೆ. ಒಟ್ಟು 13,061 ಮಂದಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದಾರೆ.ಕಳೆದ ವರ್ಷವೂ ಕೋವಿಡ್ ಪ್ರಥಮ ಅಲೆಯ ಹಿನ್ನೆಲೆಯಲ್ಲಿ ಸುಮಾರು ಒಂದು ತಿಂಗಳ ಅವಧಿಗೆ ಮಾತ್ರವೇ ಪ್ರಥಮ ಪಿಯುಸಿ ಸೇರಿದಂತೆ ಶಾಲಾ ಕಾಲೇಜುಗಳು ಭೌತಿಕ ತರಗತಿಗಳನ್ನು ನಡೆಸಲು ಸಾಧ್ಯವಾಗಿತ್ತು. ಈ ಬಾರಿ ಕೊರೋನ ದ್ವಿತೀಯ ಅಲೆ ಬಹುತೇಕ ತಗ್ಗಿದ್ದು, ಜನಸಾಮಾನ್ಯರು ಹಾಗೂ ಪೋಷಕರೂ ಬಹುತೇಕವಾಗಿ ಆತಂಕರಹಿತರಾಗಿ ಮಕ್ಕಳನ್ನು ಶಾಲಾ ಕಾಲೇಜಿಗೆ ಕಳುಹಿಸಲು ಉತ್ಸುಕರಾಗಿದ್ದಾರೆ. ಹಾಗಾಗಿ ಮುಂದಿನ ಕೆಲ ದಿನಗಳಲ್ಲಿಯೇ ಭೌತಿಕ ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ಹಿಂದಿನಂತೆ ಭೌತಿಕ ತರಗತಿಗಳ ಮೂಲಕ ವಿದ್ಯಾರ್ಥಿಗಳ ಶಿಕ್ಷಣದ ಭವಿಷ್ಯವೂ ಸಹಜವಾಗುವ ಭರವಸೆ ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News