ವಿಶ್ವಕಪ್ ಬಳಿಕ ಟ್ವೆಂಟಿ-20 ನಾಯಕತ್ವ ತ್ಯಜಿಸಲು ನಿರ್ಧಾರ: ವಿರಾಟ್ ಕೊಹ್ಲಿ

Update: 2021-09-16 12:55 GMT

ಹೊಸದಿಲ್ಲಿ: ಭಾರತದ ಮೂರು ಮಾದರಿ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮುಂಬರುವ ಟ್ವೆಂಟಿ-20 ವಿಶ್ವಕಪ್ ಬಳಿಕ ಟ್ವೆಂಟಿ-20 ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಯುವುದಾಗಿ ಟ್ವಿಟರ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.

ಈ ಕುರಿತು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ಕೊಹ್ಲಿ, ನಾನು ದೇಶವನ್ನು ಪ್ರತಿನಿಧಿಸಿದ್ದು ಮಾತ್ರವಲ್ಲ ಭಾರತೀಯ ಕ್ರಿಕೆಟ್ ತಂಡವನ್ನು ಹೆಚ್ಚಿನ ಸಾಮರ್ಥ್ಯದೊಂದಿಗೆ ಮುನ್ನಡೆಸುವ ಅಪೂರ್ವ ಅವಕಾಶವೂ ಲಭಿಸಿದೆ.  ಭಾರತ ಕ್ರಿಕೆಟ್ ತಂಡದ ನಾಯಕನಾಗಿ ನನ್ನ ಪಯಣದ ವೇಳೆ ನನ್ನನ್ನು ಬೆಂಬಲಿಸಿದವರಿಗೆ ಧನ್ಯವಾದ ತಿಳಿಸುವೆ.

ನಾನು ಕಳೆದ 8-9 ವರ್ಷಗಳಿಂದ ಎಲ್ಲ 3 ಮಾದರಿ ಕ್ರಿಕೆಟ್ ನಲ್ಲಿ ಆಡುತ್ತಿದ್ದು, ಕಳೆದ ಐದಾರು ವರ್ಷಗಳಿಂದ ನಿಯಮಿತವಾಗಿ ಎಲ್ಲ ಮೂರು ಮಾದರಿಯ ಕ್ರಿಕೆಟ್ ತಂಡದ ನಾಯಕತ್ವವನ್ನು ವಹಿಸಿಕೊಂಡಿರುವೆ. ಇದರಿಂದ ನನಗೆ ಕೆಲಸದ ಭಾರ ಅಧಿಕವಾಗಿದೆ.  ನಾನು ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ನಾಯಕತ್ವದತ್ತ ಸಂಪೂರ್ಣ ಗಮನ ಹರಿಸಲು ಬಯಸುವೆ. ಟಿ-20 ನಾಯಕನಾಗಿ ಸರ್ವ ಪ್ರಯತ್ನಮಾಡಿದ್ದೇನೆ. ನಾನು ಟಿ-20 ತಂಡದ ಬ್ಯಾಟ್ಸ್ ಮನ್ ಆಗಿ ಮುಂದುವರಿಯುವೆ. ಅಕ್ಟೋಬರ್ ನಲ್ಲಿ ದುಬೈನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಬಳಿಕ ಟಿ-20 ತಂಡದ ನಾಯಕತ್ವವನ್ನು ತ್ಯಜಿಸಲು ನಿರ್ಧರಿಸಿದ್ದೇನೆ. ಕೋಚ್ ರವಿ ಶಾಸ್ತ್ರಿ ಹಾಗೂ ಸಹ ಆಟಗಾರ ರೋಹಿತ್ ಶರ್ಮಾ ಅವರೊಂದಿಗೆ ದೀರ್ಘ ಚರ್ಚೆ ನಡೆಸಿ ಈ ನಿರ್ಧಾರಕ್ಕೆ ಬಂದಿರುವೆ. ಈ ಕುರಿತಾಗಿ ಬಿಸಿಸಿಐ ಕಾರ್ಯದರ್ಶಿ ಜಯ ಶಾ ಹಾಗೂ ಅಧ್ಯಕ್ಷ ಸೌರವ್ ಗಂಗುಲಿಯವರೊಂದಿಗೆ ಮಾತನಾಡಿದ್ಧೇನೆ ಎಂದು ಕೊಹ್ಲಿ ಟ್ವಿಟರ್ ನಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News