2020ರಲ್ಲಿ ತಪ್ಪು ಮಾಹಿತಿಗಳ ಪ್ರಸರಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಶೇ.214ರಷ್ಟು ಏರಿಕೆ: ಎನ್ ‌ಸಿಆರ್‌ ಬಿ

Update: 2021-09-16 14:17 GMT

ಹೊಸದಿಲ್ಲಿ,ಸೆ.16: ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (ಎನ್‌ ಸಿಆರ್‌ ಬಿ)ದ ಇತ್ತೀಚಿನ ಅಂಕಿಅಂಶಗಳಂತೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ 2020ರ ಕೋವಿಡ್ ಸಾಂಕ್ರಾಮಿಕದ ವರ್ಷದಲ್ಲಿ ತಪ್ಪು ಮಾಹಿತಿಗಳು/ಸುಳ್ಳು ಸುದ್ದಿಗಳ ಪ್ರಸರಣದಲ್ಲಿ ಶೇ.214ರಷ್ಟು ಏರಿಕೆಯಾಗಿತ್ತು.

2020ರಲ್ಲಿ ಸುಳ್ಳು ಸುದ್ದಿಗಳ 1,527 ಪ್ರಕರಣಗಳು ದಾಖಲಾಗಿದ್ದರೆ,ಇಂತಹ ಪ್ರಕರಣಗಳ ಸಂಖ್ಯೆ 2019ರಲ್ಲಿ 486 ಮತ್ತು 2018ರಲ್ಲಿ 280 ಆಗಿದ್ದವು. 2020ರಲ್ಲಿ ತೆಲಂಗಾಣ (273 ಪ್ರಕರಣಗಳು) ಅಗ್ರಸ್ಥಾನದಲ್ಲಿದ್ದರೆ,ತಮಿಳುನಾಡು (188) ಮತ್ತು ಉತ್ತರ ಪ್ರದೇಶ (166) ನಂತರದ ಸ್ಥಾನಗಳಲ್ಲಿದ್ದವು. ನಗರಗಳ ಪೈಕಿ ಹೈದರಾಬಾದ್‌ನಲ್ಲಿ ಇಂತಹ ಗರಿಷ್ಠ (208) ಪ್ರಕರಣಗಳು ದಾಖಲಾಗಿದ್ದರೆ,ನಂತರದ ಸ್ಥಾನಗಳಲ್ಲಿ ಚೆನ್ನೈ (42) ಮತ್ತು ದಿಲ್ಲಿ (30 ) ಇವೆ.

ಸುಳ್ಳು ಸುದ್ದಿಗಳು ಅಥವಾ ಸುಳ್ಳು ಮಾಹಿತಿಗಳ ಪ್ರಸರಣವು ಐಪಿಸಿಯ ಕಲಂ 505ರಡಿ ಮೂರು ವರ್ಷಗಳವರೆಗೆ ಜೈಲುಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದಾದ ದಂಡನೀಯ ಅಪರಾಧವಾಗಿದೆ. ಆದರೆ ಸಾಂಕ್ರಾಮಿಕದ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆ ಮತ್ತು ಆಮ್ಲಜನಕದ ಕೊರತೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯ ಪೋಸ್ಟ್‌ ಗಳಿಗೆ ಕೆಲವು ರಾಜ್ಯಗಳಲ್ಲಿ ‘ಸುಳ್ಳು ಸುದ್ದಿಗಳ ’ಹಣೆಪಟ್ಟಿಯನ್ನು ಅಂಟಿಸಲಾಗಿತ್ತು ಎಂದು ವಿಶ್ಲೇಷಕರು ಬೆಟ್ಟು ಮಾಡಿದ್ದಾರೆ.

ಈ ವರ್ಷದ ಆರಂಭದಲ್ಲಿ ಕೋವಿಡ್ ತಪ್ಪುಮಾಹಿತಿ ಕುರಿತು 138 ರಾಷ್ಟ್ರಗಳಲ್ಲಿ ನಡೆಸಲಾಗಿದ್ದ ಅಧ್ಯಯನವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಂಕ್ರಾಮಿಕದ ಕುರಿತು ತಪ್ಪುಮಾಹಿತಿಗಳಲ್ಲಿ ಸಿಂಹಪಾಲು ಭಾರತದ್ದಾಗಿತ್ತು ಮತ್ತು ಇದಕ್ಕೆ ಅಂತರ್ಜಾಲದ ಅತ್ಯಂತ ಹೆಚ್ಚು ವ್ಯಾಪಕತೆ,ಸಾಮಾಜಿಕ ಜಾಲತಾಣಗಳ ಹೆಚ್ಚಿನ ಬಳಕೆ ಮತ್ತು ಬಳಕೆದಾರರಲ್ಲಿಯ ಅಂತರ್ಜಾಲ ಸಾಕ್ಷರತೆಯ ಕೊರತೆ ಕಾರಣವಾಗಿತ್ತು ಎಂದು ಬೆಟ್ಟು ಮಾಡಿತ್ತು.

ವಾಟ್ಸ್ ಆ್ಯಪ್ ಭಾರತದಲ್ಲಿ ಬಳಕೆದಾರರಲ್ಲಿ ಕೋವಿಡ್ ತಪ್ಪುಮಾಹಿತಿಯ ಪ್ರಮುಖ ಮೂಲಗಳಲ್ಲೊಂದಾಗಿತ್ತು ಎಂದು ಜರ್ನಲ್ ಆಫ್ ಮೆಡಿಕಲ್ ಇಂಟರ್ನೆಟ್ ರೀಸರ್ಚ್ ನಡೆಸಿದ್ದ ಅಧ್ಯಯನವು ಕಂಡುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News