ದೇರಳಕಟ್ಟೆ: ಮಧ್ಯರಾತ್ರಿಯವರೆಗೆ ನಿಂತು ರಸ್ತೆಬದಿ ಇದ್ದ ಕಸ ತೆರವುಗೊಳಿಸಿದ ಮುನ್ನೂರು ಗ್ರಾ.ಪಂ ಸದಸ್ಯೆ ರೆಹಾನಾ

Update: 2021-09-16 15:18 GMT

ಮಂಗಳೂರು, ಸೆ.16: ಕುತ್ತಾರ್-ದೇರಳಕಟ್ಟೆ ಪರಿಸರದ ಪ್ರಮುಖ ರಸ್ತೆಯ ಬದಿ ಅಂದರೆ ಮದನಿ ನಗರದ ಮೂರನೆ ಅಡ್ಡರಸ್ತೆಯ ಬಳಿ ರಾಶಿ ಹಾಕಲಾಗಿದ್ದ ತ್ಯಾಜ್ಯ ವಸ್ತುವನ್ನು ಮುನ್ನೂರು ಗ್ರಾಮದ 5ನೆ ವಾರ್ಡಿನ ಸದಸ್ಯೆ ರೆಹನಾ ಭಾನು ತಡರಾತ್ರಿಯವರೆಗೂ ಸ್ವತಃ ನಿಂತು ತೆರವುಗೊಳಿಸುವ ಮೂಲಕ ಗಮನ ಸೆಳೆದಿದ್ದಾರೆ.

ಯೆನೆಪೋಯ, ನಿಟ್ಟೆ, ಫಾದರ್ ಮುಲ್ಲರ್, ಕಣಚೂರು ಹೀಗೆ ನಾಲ್ಕು ಮೆಡಿಕಲ್ ಕಾಲೇಜು ಆಸ್ಪತ್ರೆಗಳಿಗೆ ತೆರಳುವ ಮದನಿ ನಗರ ಮುಖ್ಯ ರಸ್ತೆಯ ಬದಿಯಲ್ಲಿ ಕಳೆದೊಂದು ವಾರದಿಂದ ತ್ಯಾಜ್ಯ ವಸ್ತುಗಳು ರಾಶಿ ಬೀಳುತ್ತಿತ್ತು. ಇದರಿಂದ ಪರಿಸರ ಗಬ್ಬೆದ್ದು ನಾರುತ್ತಿತ್ತಲ್ಲದೆ ಈ ಕಾಲೇಜು ಆಸ್ಪತ್ರೆಗೆ ಆಗಮಿಸುವ ಹೊರ ರಾಜ್ಯ, ಹೊರ ಜಿಲ್ಲೆಯ ಜನರು, ಸಾರ್ವಜನಿಕರು ಮೂಗುಮುಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಗ್ರಾಪಂಗೂ ಸಾರ್ವಜನಿಕರಿಂದ ದೂರು ಕೂಡ ಹೋಗಿತ್ತು. ಅದರಂತೆ 5ನೆ ವಾರ್ಡಿನ ಗ್ರಾಪಂ ಸದಸ್ಯೆ ರೆಹನಾ ಭಾನು ಮೊನ್ನೆ ರಾತ್ರಿ ಜೆಸಿಬಿ ಬಳಸಿ ರಸ್ತೆ ಬದಿ ರಾಶಿ ಹಾಕಲಾಗಿದ್ದ ತ್ಯಾಜ್ಯವನ್ನು 5-6 ಟಿಪ್ಪರ್ ಮೂಲಕ ತಡರಾತ್ರಿಯವರೆಗೂ ಸ್ವತಃ ಸ್ಥಳದಲ್ಲಿ ನಿಂತು ತೆರವುಗೊಳಿಸಿದ್ದಾರೆ.

ಈ ಬಗ್ಗೆ 'ವಾರ್ತಾಭಾರತಿ' ಜೊತೆ ಮಾತನಾಡಿದ ರೆಹನಾ ಭಾನು ಕಳೆದೊಂದು ವಾರದಿಂದ ಈ ಪರಿಸರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯರಾಶಿ ಕಾಣಿಸತೊಡಗಿತು. ಹಾಗಾಗಿ ಕಾದು ನಿಂತು ಪರಿಶೀಲಿಸುವುದು ಅನಿವಾರ್ಯವಾಯಿತು. ಹಾಗೇ ದ್ವಿಚಕ್ರ ವಾಹನದಲ್ಲಿ ಇಬ್ಬರು ತಂದು ಎಸೆಯುವುದನ್ನು ಪತ್ತೆ ಹಚ್ಚಿದೆವು. ಅಲ್ಲದೆ ಒಬ್ಬರಿಂದ ಎಸೆಯಲಾದ ತ್ಯಾಜ್ಯವನ್ನು ಹೆಕ್ಕಿಸಿ ಎಚ್ಚರಿಕೆ ನೀಡಿದೆವು. ಆ ಬಳಿಕ ಗ್ರಾಪಂ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ, ಸದಸ್ಯರಾದ ಸಿರಾಜ್ ಮದನಿ ನಗರ, ಆರ್‌ಕೆಸಿ ಅಬ್ದುಲ್ ಅಝೀಝ್, ಪಿಡಿಒ ರವೀಂದ್ರ ರಾಜೀವ್ ನಾಯ್ಕೆ ಮತ್ತು ವಾರ್ಡಿನ ಇತರ ಸದಸ್ಯರ ಸಹಕಾರ ಪಡೆದು ಜೆಸಿಬಿ ಬಳಸಿ ತ್ಯಾಜ್ಯ ತೆರವುಗೊಳಿಸಿದೆವು. ಅಲ್ಲದೆ ಸೋಲಾರ್ ದೀಪ ಮತ್ತು ಸಿಸಿ ಕ್ಯಾಮರಾ ಅಳವಡಿಸಿ ಮುಂದೆ ತ್ಯಾಜ್ಯ ಎಸೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News