ಎನ್‌ಇಸಿ ವಿರುದ್ಧ ಸಿಎಫ್‌ಐ ಪ್ರತಿಭಟನೆ: ಪೊಲೀಸರಿಂದ ಹಲ್ಲೆಗೊಳಗಾದ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

Update: 2021-09-16 15:24 GMT

ಮಂಗಳೂರು, ಸೆ.16: ಕ್ಯಾಂಪಸ್ ಫ್ರಂಟ್ ಇಂಡಿಯಾ ನೇತೃತ್ವದಲ್ಲಿ ಎನ್‌ಇಸಿ ವಿರುದ್ಧ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ ಪೊಲೀಸರಿಂದ ದೌರ್ಜನ್ಯಕ್ಕೊಳಗಾದ ಇಬ್ಬರು ವಿದ್ಯಾರ್ಥಿನಿಯರ ಸಹಿತ ಏಳು ಮಂದಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿದ್ಯಾರ್ಥಿನಿಯರಾದ ಆಯಿಶತ್ ಮುರ್ಶಿದಾ, ಫಾತಿಮಾ ಹಾಗು ವಿದ್ಯಾರ್ಥಿಗಳಾದ ಇಹ್ತಿಶಾಂ, ನಕೀಬ್, ಇಸ್ಮಾಯೀಲ್ ಫಯಾಝ್, ಹಫೀಝ್, ಅಬ್ದುಲ್ ಹಮೀದ್, ಮುಹಮ್ಮದ್ ಶಾಹಿಕ್ ಎಂಬವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಆ ಪೈಕಿ ಇಬ್ಬರು ವಿದ್ಯಾರ್ಥಿನಿಯರು ಪ್ರಥಮ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎಂದು ತಿಳಿದು ಬಂದಿದೆ.

ಪ್ರತಿಭಟನೆಯು ಅತ್ಯಂತ ಶಾಂತಿಯುತವಾಗಿಯೇ ನಡೆಯುತ್ತಿತ್ತು. ಅಷ್ಟರಲ್ಲಿ ಪೊಲೀಸರು ಏಕಾಏಕಿ ಮನಬಂದಂತೆ ಲಾಠಿ ಬೀಸತೊಡಗಿದರು. ಕೈಗೆ ಸಿಕ್ಕವರನ್ನು ವಿದ್ಯಾರ್ಥಿಗಳು ಎಂದು ಪರಿಗಣಿಸದೆ ಹಲ್ಲೆ ನಡೆಸತೊಡಗಿದರು. ನನ್ನ ಕಾಲಿಗೆ ಲಾಠಿಯಿಂದ ಹಲ್ಲೆ ನಡೆಸಿದರು. ರಸ್ತೆಯುದ್ದಕ್ಕೂ ಎಳೆದೊಯ್ಡರು. ಬಸ್ಸಿನ ಮೆಟ್ಟಿಲಲ್ಲಿ ಕುಳ್ಳಿರಿಸಿ ಮುಖಕ್ಕೆ ಹಲ್ಲೆಗೈದರು ಎಂದು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿ ಮುಹಮ್ಮದ್ ಶಾಹೀಕ್ ಆರೋಪಿಸಿದ್ದಾರೆ.

ಎನ್‌ಇಸಿ ವಿರುದ್ಧ ನಾವೇನೂ ಕದ್ದುಮುಚ್ಚಿ ಪ್ರತಿಭಟನೆ ಮಾಡಿದ್ದಲ್ಲ, ಪೊಲೀಸರಿಗೆ ಮುಂಚಿತವಾಗಿ ತಿಳಿಸಿದ್ದೆವು. ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿಯೂ ಹೇಳಿದ್ದೆವು. ಸುಮಾರು 1 ಗಂಟೆ ಶಾಂತಿಯುತ ಪ್ರತಿಭಟನೆ ನಡೆದಿತ್ತು. ಆದರೆ ಪೊಲೀಸರು ಏಕಾಏಕಿ ಉದ್ದೇಶ ಪೂರ್ವಕವಾಗಿ ಲಾಠಿಜಾರ್ಜ್ ಮಾಡಿದರು. ಆವಾಗಲೂ ಅದರ ನಿಯಮವನ್ನು ಪಾಲಿಸಲಿಲ್ಲ. ಗಂಭೀರ ಗಾಯಗೊಂಡ ಅನೇಕ ಮಂದಿಯನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಏನೂ ಆಗಿಲ್ಲ ಎಂದು ಬಿಡುಗಡೆಗೊಳಿಸಿದ್ದಾರೆ. ಆ ಪೈಕಿ ಹಲವಾರು ಮಂದಿಯ ನೋವು ಉಲ್ಭಣಿಸಿದೆ. ರಾಜ್ಯದ ಬಳ್ಳಾರಿ, ಹೊಸಪೇಟೆ, ಕೊಪ್ಪಳ ಮತ್ತಿತರ ಕಡೆಯ ವಿದ್ಯಾರ್ಥಿಗಳು ಇದೀಗ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಮಾಹಿತಿ ಬರುತ್ತಿದೆ. ವಿದ್ಯಾರ್ಥಿಗಳ ಮೇಲೆ ನಡೆದಿರುವ ಪೊಲೀಸ್ ದೌರ್ಜನ್ಯ ಖಂಡನೀಯ. ಇದರ ವಿರುದ್ಧ ಹೋರಾಟ ಮಾಡುವುದಾಗಿ ಸಿಎಫ್‌ಐ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಸಾದಿಕ್ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News