ಪಾಕಿಸ್ತಾನವನ್ನು ಬಾಡಿಗೆಯ ಬಂದೂಕಿನಂತೆ ಬಳಸಿಕೊಂಡ ಅಮೆರಿಕ: ಇಮ್ರಾನ್‌ ಖಾನ್ ಹೇಳಿಕೆ

Update: 2021-09-16 16:39 GMT
photo: twitter.com/ImranKhanPTI

ಇಸ್ಲಮಾಬಾದ್, ಸೆ.16: ಅಫ್ಗಾನಿಸ್ತಾನದಲ್ಲಿ 20 ವರ್ಷ ಅಮೆರಿಕದ ಉಪಸ್ಥಿತಿಯಿದ್ದ ಸಂದರ್ಭ ಅಮೆರಿಕವು ಪಾಕಿಸ್ತಾನವನ್ನು ಬಾಡಿಗೆಯ ಬಂದೂಕಿನಂತೆ ಬಳಸಿಕೊಂಡಿತ್ತು ಮತ್ತು ಭಯೋತ್ಪಾದನೆಯ ವಿರುದ್ಧ ಅಮೆರಿಕದ ಯುದ್ಧ ಪಾಕಿಸ್ತಾನಕ್ಕೆ ವಿನಾಶಕಾರಿಯಾಗಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ಖಾನ್ ಹೇಳಿದ್ದಾರೆ.

ಅಮೆರಿಕದ ಪಾಲಿಗೆ ನಾವು ಬಾಡಿಗೆಯ ಬಂದೂಕು ಆಗಿದ್ದೆವು. ಅಫ್ಗಾನ್‌ನ ಯುದ್ಧವನ್ನು ಅವರು ಗೆಲ್ಲುವಂತೆ ನಾವು ಮಾಡಬೇಕಿತ್ತು, ಆದರೆ ಅದು ಅಸಾಧ್ಯವಾಗಿತ್ತು ಎಂದು ಸಿಎನ್‌ಎನ್ ಜತೆಗಿನ ಸಂದರ್ಶನದಲ್ಲಿ ಇಮ್ರಾನ್ ಹೇಳಿದ್ದಾರೆ.

ಪಾಕ್‌ ನೊಂದಿಗಿನ ಸಂಬಂಧವನ್ನು ಮರುಪರಿಷ್ಕರಿಸುವ ಉದ್ದೇಶವಿದೆ . ಪಾಕಿಸ್ತಾನದ ಹಲವು ಹಿತಾಸಕ್ತಿಗಳು ನಮ್ಮ ಹಿತಾಸಕ್ತಿಯ ಜತೆ ಸಂಘರ್ಷಕ್ಕೆ ಕಾರಣವಾಗಿದೆ ಎಂದು ಕೆಲ ದಿನದ ಹಿಂದೆ ಅಮೆರಿಕದ ವಿದೇಶ ಸಚಿವ ಆ್ಯಂಟನಿ ಬ್ಲಿಂಕೆನ್ ಹೇಳಿಕೆ ನೀಡಿದ್ದರು.

ಪಾಕಿಸ್ತಾನ ತಾಲಿಬಾನ್‌ನೊಂದಿಗೆ ಸ್ನೇಹ ಸಂಬಂಧ ಮುಂದುವರಿಸಿದೆ. ಜೊತೆಗೆ, ಅಫ್ಗಾನ್‌ನಲ್ಲಿ ಅಮೆರಿಕ ನೇತೃತ್ವದ ವಿದೇಶಿ ಪಡೆಗಳು ತಾಲಿಬಾನ್‌ಗಳೊಂದಿಗೆ ಸಂಘರ್ಷ ನಡೆಸುತ್ತಿದ್ದಾಗ ಪಾಕಿಸ್ತಾನ ತಾಲಿಬಾನ್‌ಗೆ ನೆರವು ನೀಡಿದೆ ಎಂಬ ಆರೋಪವಿದೆ. ಈ ಬಗ್ಗೆ ಅಂತರಾಷ್ಟ್ರೀಯ ಸಮುದಾಯ ಸಾಕಷ್ಟು ಪುರಾವೆ ಒದಗಿಸಿದ್ದರೂ, ಈ ವರದಿಯನ್ನು ಇಮ್ರಾನ್ ಖಾನ್ ತಳ್ಳಿಹಾಕಿದ್ದಾರೆ.

ಪಾಕಿಸ್ತಾನ ಭಯೋತ್ಪಾದಕರಿಗೆ ಸುರಕ್ಷಿತ ತಾಣ ಎಂದು ಆರೋಪಿಸಲಾಗುತ್ತಿದೆ. ಆದರೆ ಪಾಕ್-ಅಫ್ಘಾನ್ ಗಡಿಭಾಗ ಅಮೆರಿಕದ ಡ್ರೋನ್‌ಗಳ ಕಣ್ಗಾವಲು ವ್ಯವಸ್ಥೆಯ ವ್ಯಾಪ್ತಿಯಲ್ಲಿರುವಾಗ ಸುರಕ್ಷಿತ ತಾಣ ಹೇಗಾಗುತ್ತದೆ? ಪಾಕಿಸ್ತಾನದ ನೆಲದಲ್ಲಿ ನಿಂತು ಪಾಕಿಸ್ತಾನಿ ತಾಲಿಬಾನಿಗಳು ನಮ್ಮ ವಿರುದ್ಧಧ ದಾಳಿ ತೀವ್ರಗೊಳಿಸುತ್ತಿರುವಾಗ ನಾವು ಅಫ್ಘಾನ್‌ನ ತಾಲಿಬಾನ್ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಲು ಸಾಧ್ಯವೇ ಎಂಬುದು ಇಲ್ಲಿರುವ ನಿಜವಾದ ಪ್ರಶ್ನೆಯಾಗಿದೆ ಎಂದ ಅವರು, ಅಫ್ಘಾನ್‌ನಲ್ಲಿ ಇಸ್ಲಾಮಿಕ್ ಎಮಿರೇಟ್ಸ್‌ನ ನೂತನ ಹಂಗಾಮಿ ಸರಕಾರವನ್ನು ಮಾನ್ಯ ಮಾಡುವ ಬಗ್ಗೆ ಅಂತರಾಷ್ಟ್ರೀಯ ಸಮುದಾಯ ಸಾಮರಸ್ಯದ ಭಾವನೆ ಬೆಳೆಸಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News