ಚೆಂಬು ಗ್ರಾಪಂ ಸದಸ್ಯೆಯ ಮೃತದೇಹ ಪತ್ತೆ, ಕೊಲೆ ಶಂಕೆ: ಶಂಕಿತ ಆರೋಪಿ ನೇಣಿಗೆ ಶರಣು ?

Update: 2021-09-16 17:29 GMT
ಮುತ್ತು

ಮಡಿಕೇರಿ, ಸೆ.16: ಮಂಗಳವಾರ ರಾತ್ರಿ ನಾಪತ್ತೆಯಾಗಿದ್ದ ಮಡಿಕೇರಿ ತಾಲೂಕಿನ ಚೆಂಬು ಗ್ರಾಪಂ ಸದಸ್ಯೆ ಹಾಗೂ ಆಕೆಯ ಸಂಬಂಧಿ ಯೊಬ್ಬರ ಮೃತದೇಹ ಮರವೊಂದರಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ವರದಿಯಾಗಿದೆ.

ಪಂಚಾಯತ್ ಸದಸ್ಯೆ ಕಮಲಾ ಕೇಶವ (35) ಹಾಗೂ ಆಕೆಯ ಸಂಬಂಧಿ ಮುತ್ತು (50) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಘಟನೆ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕಮಲಾ ಕೇಶವ ಹಾಗೂ ಮುತ್ತು ಎಂಬವರು ಸಂಬಂಧಿಗಳಾಗಿದ್ದು, ದಬ್ಬಡ್ಕ ಗ್ರಾಮ ನಿವಾಸಿಗಳಾಗಿದ್ದಾರೆ. ಈ ಹಿಂದೆ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಮುತ್ತು ತನಗೆ ಮಾನಸಿಕ ಹಿಂಸೆ ನೀಡುತ್ತಿರುವುದಾಗಿ ಕಮಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಮಲಾರನ್ನು ಮುತ್ತು ದ್ವೇಷಿಸುತ್ತಿದ್ದ ಎಂದು ಹೇಳಲಾಗಿದೆ.

ಸೆ.14ರಂದು ರಾತ್ರಿ ಸಮೀಪದ ಮನೆಯವರೊಬ್ಬರ ಮಗುವಿನ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಕಮಲಾ ತನ್ನ ಅತ್ತೆ, ಪುತ್ರಿ ಮತ್ತು ಮೈದುನನೊಂದಿಗೆ ತೆರಳುತ್ತಿದ್ದರು. ಈ ಬಗ್ಗೆ ಮಾಹಿತಿ ಅರಿತ ಮುತ್ತು ದಬ್ಬಡ್ಕ ಸೇತುವೆ ಬಳಿ ಕಮಲಾ ಮತ್ತವರ ಕುಟುಂಬ ಸದಸ್ಯರನ್ನು ಅಡ್ಡಗಟ್ಟಿದ್ದಾನೆ ಎನ್ನಲಾಗಿದೆ. ಈ ಸಂದರ್ಭ ಕಮಲಾ ಹಾಗೂ ಆರೋಪಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಮುತ್ತು ಕಮಲಾರನ್ನು ಸೇತುವೆ ಕೆಳಗಿನ ನದಿಗೆ ತಳ್ಳಿದ್ದಾನೆ. ಜೊತೆಯಲ್ಲಿದ್ದವರು ಮುತ್ತುವನ್ನು ತಡೆಯಲು ಹೋದಾಗ ಕತ್ತಿಯಿಂದ ಕಡಿಯುವುದಾಗಿ ಹೆದರಿಸಿದ್ದಾನೆ. ನಂತರ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಕಮಲಾರನ್ನು ಮುತ್ತು ನದಿಯ ದಡಕ್ಕೆ ಎಳೆತಂದಿದ್ದನ್ನು ಪ್ರತ್ಯಕ್ಷದರ್ಶಿ ಗಿರೀಶ್ ನೋಡಿದ್ದು, ಗ್ರಾಮಸ್ಥರಿಗೆ ವಿಚಾರ ತಿಳಿಸಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಸಂಪಾಜೆ ಪೊಲೀಸರು ಹಾಗೂ ಗ್ರಾಮಸ್ಥರು ಕತ್ತಲಲ್ಲಿ ಸುರಿಯುವ ಮಳೆಯ ನಡುವೆ ಹುಡುಕಾಟ ನಡೆಸಿದ್ದರು. ಆದರೆ, ಇಬ್ಬರ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ.

ಬುಧವಾರ ಬೆಳಗ್ಗೆ ಮತ್ತೆ ಹುಡುಕಾಟ ನಡೆಸಿದ ಸಂದರ್ಭ ದಬ್ಬಡ್ಕ ಗ್ರಾಮದ ಕಾಡು ಪ್ರದೇಶದ ಮರವೊಂದರಲ್ಲಿ ಇಬ್ಬರ ಮೃತದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ರವಿ ಕಿರಣ್ ಮತ್ತು ಎಎಸ್ಸೈ ಶ್ರೀಧರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಹಜರು ನಡೆಸಿದರು.

ಮೃತದೇಹಗಳನ್ನು ಮಡಿಕೇರಿ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಸ್ಥಳಾಂತರಿಸಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಗೊಂದಲ: ಮಂಗಳವಾರ ರಾತ್ರಿ ಕಮಲಾ ಹಾಗೂ ಮುತ್ತು ನಾಪತ್ತೆಯಾಗಿದ್ದು, ಬುಧವಾರ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಮಲಾ ಮೃತದೇಹ ಸೀರೆಯಿಂದ ಹಾಗೂ ಮುತ್ತು ತನ್ನ ಲುಂಗಿಯಿಂದ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಸ್ಥಳದಲ್ಲಿ ಮೊಬೈಲ್ ಪೋನ್, ಟಾರ್ಚ್, ಕತ್ತಿ, ಒಂದು ಸಣ್ಣ ಬಾಟಲಿ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ಹಲವು ಸಂಶಯ: ದಬ್ಬಡ್ಕ ಸೇತುವೆಯಿಂದ ಕೆಳಗೆ ಬಿದ್ದ ಕಮಲಾರನ್ನು ದಡಕ್ಕೆ ತಂದ ಮುತ್ತು ಮರಕ್ಕೆ ನೇಣು ಹಾಕಿ ನಂತರ ತಾನೂ ನೇಣು ಹಾಕಿಕೊಂಡನೇ ಅಥವಾ ಅತ್ಯಾಚಾರವೆಸಗಿ ಕೊಲೆ ಮಾಡಿದನೇ ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸಿದ್ದು, ಪೊಲೀಸರ ತನಿಖೆ ಮತ್ತು ಮರಣೋತ್ತರ ಪರೀಕ್ಷೆಯ ವರದಿಯ ನಂತರವಷ್ಟೇ ಸತ್ಯ ಬಯಲಾಗಬೇಕಾಗಿದೆ. ಮುತ್ತು 15 ವರ್ಷಗಳ ಹಿಂದೆ ಪತ್ನಿಯನ್ನು ತೊರೆದಿದ್ದು, ಏಕಾಂಗಿಯಾಗಿ ಜೀವನ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News