ಬೆನ್ನುನೋವಿನಿಂದ ಬೇಸತ್ತು ನಿವೃತ್ತಿಗೆ ನಿರ್ಧರಿಸಿದ ಅಥ್ಲೀಟ್ ಸ್ವಪ್ನಾ ಬರ್ಮನ್

Update: 2021-09-17 12:21 GMT

ಹೊಸದಿಲ್ಲಿ: ಬೆನ್ನು ನೋವಿನಿಂದ ಬಳಲುತ್ತಿರುವ,  ಖಿನ್ನತೆಯ ವಿರುದ್ಧ ಹೋರಾಡುತ್ತಿರುವ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಕ್ರೀಡಾಪಟು ಸ್ವಪ್ನಾ ಬರ್ಮನ್ ನಿವೃತ್ತಿಯಾಗಲು ನಿರ್ಧರಿಸಿದ್ದಾರೆ. ಈ ಕುರಿತು ಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆಯನ್ನು ಮಾಡಲಿದ್ದಾರೆ.

ನಾರ್ತ್ ಈಸ್ಟ್ ಫ್ರಾಂಟಿಯರ್ ರೈಲ್ವೇ ಕ್ರೀಡಾಪಟುವಾಗಿರುವ  ಸ್ವಪ್ನಾ ಅವರು ವಾರಂಗಲ್‌ನಲ್ಲಿ ನಡೆದ 60 ನೇ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಹೈಜಂಪ್‌ನಲ್ಲಿ ಚಿನ್ನದ ಪದಕ ಗೆದ್ದ 24 ಗಂಟೆಯೊಳಗೆ ಈ ನಿರ್ಧಾರ ಕೈಗೊಂಡಿದ್ದಾರೆ.

"ನನಗೆ ನೋವು ಸಹಿಸಿಕೊಳ್ಳಲಾಗುತ್ತಿಲ್ಲ. ಮಾನಸಿಕವಾಗಿ ನಾನು ತುಂಬಾ ಖಿನ್ನತೆಗೆ ಒಳಗಾಗಿದ್ದೇನೆ. ಕ್ರೀಡಾಕೂಟಗಳಲ್ಲಿ ಇನ್ನು ಸ್ಪರ್ಧಿಸುವುದು ಸುಲಭವಲ್ಲ. ಸ್ವಲ್ಪ ಗೊಂದಲವಿದ್ದರೂ ವಿದಾಯ ಹೇಳಲು ಸಿದ್ಧವಾಗಿದ್ದೇನೆ. ಕೋಲ್ಕತಾ ತಲುಪಿದ ನಂತರ ಈ ಕುರಿತಾಗಿ ಘೋಷಣೆ ಮಾಡುವೆ’’ ಎಂದು ಸ್ವಪ್ನಾ ವಾರಂಗಲ್‌ನಿಂದ ಪಿಟಿಐಗೆ ತಿಳಿಸಿದರು.

ಸ್ವಪ್ನಾ ಜಕಾರ್ತಾದಲ್ಲಿ 2018 ರಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್ ನಲ್ಲಿ  ಚಿನ್ನ ಗೆದ್ದ ಮೊದಲ ಭಾರತೀಯ ಹೆಪ್ಟಾಥ್ಲೀಟ್ ಎಂಬ ಹಿರಿಮೆಗೆ ಪಾತ್ರರಾಗಿದ್ದರು.  ಸ್ವಪ್ನಾ ಅವರ ಎರಡೂ ಪಾದದ ಮೇಲೆ ಆರು ಕಾಲ್ಬೆರಳುಗಳಿವೆ. 2019ರಲ್ಲಿ ದೋಹಾದಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದರು. ಅದು ಅವರ ಕೊನೆಯ ಅಂತರ್ ರಾಷ್ಟ್ರೀಯ ಸ್ಪರ್ಧೆಯಾಗಿತ್ತು.

ಕೋವಿಡ್-19ನಿಂದಾಗಿ ಹೇರಲಾಗಿದ್ದ ಲಾಕ್‌ಡೌನ್ ನಿಂದಾಗಿ ಸ್ವಪ್ನಾ 2020 ರಲ್ಲಿ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಹಾಗೂ 2021 ರಲ್ಲಿ ಅವರು ಟೋಕಿಯೊ ಗೇಮ್ಸ್ ಅರ್ಹತಾ ಅಂಕವನ್ನು ಗುರಿಯಾಗಿಸಿಕೊಂಡಿದ್ದರು. ಆದರೆ ಮತ್ತೆ ಕಾಡಿದ ಗಾಯದ ಸಮಸ್ಯೆಗಳು ಹಾಗೂ ಕೊರೋನದ  ಎರಡನೇ ಅಲೆಯು ಅವರ ಎಲ್ಲಾ ಯೋಜನೆಗಳನ್ನು ಹಳಿ ತಪ್ಪಿಸಿತ್ತು.

ಈ ವರ್ಷ ಸ್ವಪ್ನಾ ಅವರು ಫೆಡರೇಶನ್ ಕಪ್ ಹಾಗೂ ಈಗ ನಡೆಯುತ್ತಿರುವ ಓಪನ್ ನ್ಯಾಷನಲ್ಸ್‌ನಲ್ಲಿ ಮಾತ್ರ ಭಾಗವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News