ಮಂಗಳೂರು : ಪ್ರಧಾನಿ ಮೋದಿ ಜನ್ಮ ದಿನವನ್ನು ನಿರುದ್ಯೋಗ ದಿನವನ್ನಾಗಿ ಆಚರಿಸಿದ ಯುವ ಕಾಂಗ್ರೆಸ್

Update: 2021-09-17 14:31 GMT

ಮಂಗಳೂರು, ಸೆ.17: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯು ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಶುಕ್ರವಾರ ಆಚರಿಸುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟಿಸಿ ಗಮನ ಸೆಳೆಯಿತು.

ನಗರದ ಕ್ಲಾಕ್‌ ಟವರ್ ಬಳಿ ಜಮಾಯಿಸಿದ ಪಕ್ಷದ ನೂರಾರು ಕಾರ್ಯಕರ್ತರು, ಮುಖಂಡರು ಪ್ರಧಾನಿ ಮೋದಿಯ ಹೆಸರಿನಲ್ಲಿ ಟೀ ಸ್ಟಾಲ್, ಗೃಹ ಸಚಿವ ಅಮಿತ್ ಶಾ ಹೆಸರಿನಲ್ಲಿ ಪಕೋಡ ಸ್ಟಾಲ್, ಆರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರಿನಲ್ಲಿ ನಿರ್ಮಲಾ ಶೂ ಪಾಲಿಶ್ ತೆರೆದರಲ್ಲದೆ ಟೀ ಮತ್ತು ಪಕೋಡ ಮಾಡಿ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಸಾರ್ವಜನಿಕರಿಗೆ ವಿತರಿಸಿ ಅಣಕಿಸಿದರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿಗೆ ಧಿಕ್ಕಾರ ಕೂಗಿದರು. ನಿಮ್ಮ ಮನದ ಮಾತು ನಿಲ್ಲಿಸಿ, ನಮ್ಮ ಮನದ ಮಾತು ಆಲಿಸಿ. ಪ್ರಧಾನ ಮಂತ್ರಿಗಳೇ ಮಾತು ಸಾಕು, ಉದ್ಯೋಗ ಕೊಡಿ ಎಂಬಿತ್ಯಾದಿ ಭಿತ್ತಿಪತ್ರ ಪ್ರದರ್ಶಿಸಿದರು. ಬೇಡವೇ ಬೇಡ, ಪಕೋಡ ಪ್ರಧಾನಿ ಬೇಡ ಎಂದು ಘೋಷಣೆ ಕೂಗಿದರು. ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.

ಮೋದಿ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ದೇಶದ ಆರ್ಥಿಕ ಸ್ಥಿತಿ ಪಾತಾಳಕ್ಕಿಳಿದಿದೆ. ಹಣದುಬ್ಬರ ಹೆಚ್ಚಳವಾಗಿದೆ. ಹೊಸ ಹೊಸ ಕನಸುಗಳನ್ನು ಬಿತ್ತುತ್ತಾರೆಯೇ ವಿನಃ ಅದನ್ನು ಈಡೇರಿಸಲು ಯಾವೊಂದು ಕ್ರಮವನ್ನೂ ಕೂಡ ಪ್ರಧಾನಿ ಮೋದಿ ಮಾಡುತ್ತಿಲ್ಲ. ಕೊರೋನ ಕಾಲದಲ್ಲಿ ಬಡ, ಮಧ್ಯಮ ವರ್ಗದವರ ಬದುಕು ದುಸ್ತರವಾಗಿದ್ದರೆ, ಮಿಲಿಯಾಧಿಪತಿಗಳ ಆಸ್ತಿ ಹೆಚ್ಚಳವಾಗಿದೆ. ಇದು ಹೇಗೆ ಸಾಧ್ಯವಾಯಿತು ಎಂಬುದನ್ನು ಮೋದಿ ದೇಶದ ಜನರಿಗೆ ತಿಳಿಸಬೇಕಿದೆ. ಕೊರೋನ ಸೋಂಕು ನಿಗ್ರಹದ ಹೆಸರಿನಲ್ಲಿ ಲಸಿಕೆ ರಾಜಕೀಯ ಮಾಡುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಮೋದಿಯ ವೈಫಲ್ಯವನ್ನು ಯುವ ಜನತೆಗೆ ತಿಳಿಸಿಕೊಡುವ ಸಲುವಾಗಿ ಯವ ಕಾಂಗ್ರೆಸ್ ಮೋದಿಯ ಜನ್ಮದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಿಸದೆ ನಿರ್ವಾಹವಿಲ್ಲ. ಮುಂದಿನ ದಿನಗಳಲ್ಲೂ ಯುವ ಕಾಂಗ್ರೆಸ್ ಬಿಜೆಪಿ ಮತ್ತು ಎನ್‌ಡಿಎ ಸರಕಾರದ ವಿರುದ್ಧ ಪ್ರಬಲ ಹೋರಾಟ ಮಾಡಲಿದೆ ಎಂದು ಯುವ ಕಾಂಗ್ರೆಸ್ ದ.ಕ.ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ ಹೇಳಿದರು.

ಮಾಜಿ ಸಚಿವ ರಮಾನಾಥ ರೈ ಮಾತನಾಡಿ ವರ್ಷದಲ್ಲಿ 2 ಕೋಟಿ ಉದ್ಯೋಗ ಕೊಡುವುದಾಗಿ ಆಶ್ವಾಸನೆ ನೀಡಿದ್ದ ಮೋದಿ ಇದೀಗ ದೇಶಾದ್ಯಂತ ಯುವ ಜನರನ್ನು ನಿರುದ್ಯೋಗಿಗಳನ್ನಾಗಿಸಿದ್ದಾರೆ. ಅಧಿಕಾರಕ್ಕೇರುವ ಮುನ್ನ ನೀಡಿದ್ದ ಯಾವೊಂದು ಭರವಸೆಯನ್ನೂ ಕೂಡ ಮೋದಿ ಈಡೇರಿಸಿಲ್ಲ. ಸರಕಾರದ ಕಂಪೆನಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ಬಂಡವಾಳಶಾಹಿಗಳ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ, ಮಾಜಿ ಶಾಸಕ ಮೊಯ್ದಿನ್ ಬಾವಾ, ಮಾಜಿ ಮೇಯರ್ ಶಶಿಧರ ಹೆಗ್ಡೆ, ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್, ಕಾರ್ಪೊರೇಟರ್ ಅಬ್ದುಲ್ ರವೂಫ್, ಪಕ್ಷದ ಮುಖಂಡರಾದ ಗಣೇಶ್ ಪೂಜಾರಿ, ಸುದರ್ಶನ್ ಜೈನ್, ಡಾ.ಶೇಖರ್ ಪೂಜಾರಿ, ಪ್ರಕಾಶ್ ಸಾಲ್ಯಾನ್, ಚಿತ್ತರಂಜನ್ ಶೆಟ್ಟಿ, ಸಂಶುದ್ದೀನ್ ಬಂದರ್, ಆಶೀತ್ ಪಿರೇರಾ, ಸರ್ಫಾಝ್ ನವಾಝ್ ಬಾಳ, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಸುರೇಶ್ ಜೋರಾ ಬಂಟ್ವಾಳ, ಶಾಹುಲ್ ಹಮೀದ್ ಸುಳ್ಯ, ಅನಿಲ್ ಪೈ ಬೆಳ್ತಂಗಡಿ, ಅಶೋಕ್ ಕುಮಾರ್ ಮುಲ್ಕಿ, ಜಯ ಕುಮಾರ್ ಮೂಡುಬಿದಿರೆ, ಸಿದ್ದೀಕ್ ಅಕ್ಬರ್ ಉಪ್ಪಿನಂಗಡಿ, ಪ್ರಸಾದ್ ಪುತ್ತೂರು, ಇಬ್ರಾಹೀಂ ನವಾಝ್ ಪಾಣೆಮಂಗಳೂರು, ಫೈಝಲ್ ಕಡಬ, ರಮಾನಂದ ಪೂಜಾರಿ, ದೀಪ್ತಿ ಕೋಟ್ಯಾನ್, ಸೌಮ್ಯಲತಾ, ರೋಶನ್ ರೈ, ದಿನೇಶ್ ಪಿ.ಎಸ್, ಟಿ. ಹೊನ್ನಯ್ಯ, ಪ್ರಸಾದ್ ಗಾಣಿಗ, ಶೈಲಜಾ ಅಮರ್‌ನಾಥ್, ಉಮೈ ಬಾನು, ಇರ್ಷಾದ್ ಗೂಡಂಗಡಿ, ಹರ್ಷಾದ್ ಮುಲ್ಕಿ, ಶೋಭಾ ಪಡೀಲ್, ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಶಕುಂತಳಾ ಶೆಟ್ಟಿ, ತೌಸೀಫ್ ಫರಂಗಿಪೇಟೆ, ಮೀನಾ ಟೆಲ್ಲಿಸ್, ಹಸನ್ ಫಳ್ನೀರ್, ಅಲ್ಫಾಝ್, ಯೂಸುಫ್ ಉಚ್ಚಿಲ್, ಮನ್ಸೂರ್ ಕುದ್ರೋಳಿ, ಕೌಶಿಕ್ ಬೋಳಾರ, ಫಯಾಝ್ ಅಮ್ಮೆಮ್ಮಾರ್, ನಾಗೇಂದ್ರ ಉಜ್ಜೋಡಿ, ಪ್ರತೀಕ್ ಕೊಟ್ಟಾರಿ, ಆಸಿಶ್ ನಾಯ್ಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News