ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅತ್ಯಾಚಾರ ಖಂಡಿಸಿ ಎಸ್‌ಐಒ ಪ್ರತಿಭಟನೆ

Update: 2021-09-17 13:04 GMT

ಮಂಗಳೂರು, ಸೆ.17: ದೇಶದಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅತ್ಯಾಚಾರಗಳನ್ನು ಖಂಡಿಸಿ ಎಸ್‌ಐಒ ಕುದ್ರೋಳಿ ಘಟಕವು ಗುರುವಾರ ಕುದ್ರೋಳಿ ಜಂಕ್ಷನ್ ಬಳಿ ಪ್ರತಿಭಟನೆ ನಡೆಸಿತು.

ಹೊಸದೆಹಲಿಯಲ್ಲಿ ರಾಬಿಯ ಸೈಫಿ ಎಂಬ ಸಿವಿಲ್ ಡಿಫೆನ್ಸ್ ಸಿಬ್ಬಂದಿಯನ್ನು ಅತ್ಯಾಚಾರಗೈದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಅದಲ್ಲದೆ ದೇಶದ ವಿವಿಧೆಡೆಗಳಲ್ಲಿ ಪ್ರತಿದಿನವೂ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ಎಸ್‌ಐಒ ಕಳವಳ ವ್ಯಕ್ತಪಡಿಸಿತು. 2012ರ ನಿರ್ಭಯ ಪ್ರಕರಣದ ಬಳಿಕ ದೇಶದಲ್ಲಿ ಅತ್ಯಾಚಾರ ಪ್ರಕರಣಗಳನ್ನು ನಿಯಂತ್ರಿಸಲು ಹಲವಾರು ಕಾನೂನು ಬದಲಾವಣೆಗಳನ್ನು ಮಾಡಲಾಯಿತು. ಆದರೆ 9 ವರ್ಷಗಳ ಬಳಿಕವೂ ಈ ಬದಲಾವಣೆಗಳು ಎಬ್ಬಿಸಿದ್ದ ಆಶಾವಾದ ಈಗ ನಿರಾಶೆಯಾಗಿ ಪರಿವರ್ತನೆಗೊಂಡಿದೆ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.

ಪ್ರತಿಭಟನೆಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಕುದ್ರೋಳಿ ವರ್ತುಲ ಸಂಚಾಲಕ ಮಕ್ಬೂಲ್ ಅಹ್ಮದ್, ಜಿಐಒ ರಾಜ್ಯ ಸಲಹಾ ಸಮಿತಿ ಸದಸ್ಯೆ ಆಮಿನಾ ಮುಶೀರಾ, ಎಸ್‌ಐಒ ಮಂಗಳೂರು ನಗರಾಧ್ಯಕ್ಷ ಸಲ್ಮಾನ್ ಕುದ್ರೋಳಿ, ಕಾರ್ಯದರ್ಶಿ ಇಜಾಝ್ ಕುದ್ರೋಳಿ, ಎಸ್‌ಐಒ ಕುದ್ರೋಳಿ ಶಾಖೆ ಅಧ್ಯಕ್ಷ ಮುಝಾಹಿರ್ ಕುದ್ರೋಳಿ ಮತ್ತು ಜಿಐಒ ನಗರಾಧ್ಯಕ್ಷೆ ಹನೀಫಾ ತ್ವಬೀಬಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News