ಕೆಐಒಸಿಎಲ್‌ನಿಂದ 410.23 ಕೋಟಿ ರೂ. ನಿವ್ವಳ ಲಾಭ

Update: 2021-09-17 13:16 GMT

ಮಂಗಳೂರು, ಸೆ.17: ಕೆಐಒಸಿಎಲ್ 2020-21ನೇ ಆರ್ಥಿಕ ವರ್ಷದಲ್ಲಿ 2477.83 ಕೋಟಿ ರೂ. ಆದಾಯ ಹಾಗೂ 410.23 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ ಎಂದು ಕೆಐಒಸಿಎಲ್ ಎಂಡಿ ಟಿ.ಸಾಮಿನಾಥನ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

2021-22ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ 215.92 ಕೋಟಿ ರೂ. ತೆರಿಗೆ ನಂತರದ ಆದಾಯ ಪಡೆದಿದೆ. 1059.50 ಕೋ.ರೂ. ಒಟ್ಟು ಆದಾಯ ದಾಖಲಿಸಿದೆ ಎಂದು ಸಾಮಿನಾಥನ್ ಮಾಹಿತಿ ನೀಡಿದರು.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೇವದಾರಿಯಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರು ಗಣಿಗಾರಿಕೆ ಆರಂಭಿಸುವ ಪ್ರಕ್ರಿಯೆ ವೇಗಗತಿಯಲ್ಲಿ ಸಾಗುತ್ತಿದೆ. 2022 ಮಾರ್ಚ್‌ನಲ್ಲಿ ಎರಡನೇ ಹಂತದ ಕ್ಲಿಯರೆನ್ಸ್ ದೊರೆಯಲಿದ್ದು, 2023ರಲ್ಲಿ ಗಣಿಕಾರಿಕೆ ಆರಂಭವಾಗಲಿದೆ ಎಂದವರು ತಿಳಿಸಿದರು.

ಈ ಗಣಿಗಾರಿಕೆಗಾಗಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಮೊದಲ ಹಂತದ ಅನುಮೋದನೆ ಪಡೆಯಲಾಗಿದೆ. 2023ರ ವೇಳೆಗೆ ಗಣಿಗಾರಿಕೆ ಆರಂಭಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ದೇವದಾರಿಯಲ್ಲಿ 2 ಎಂಟಿಪಿಎ ಕಬ್ಬಿಣದ ಅದಿರು ಮತ್ತು 500 ಟಿಪಿಎ ಮ್ಯಾಂಗನೀಸ್ ಅದಿರಿನ ಸಾಮರ್ಥ್ಯವಿದೆ ಎಂದು ಸಾಮಿನಾಥನ್ ಮಾಹಿತಿ ನೀಡಿದರು.

ರಾಷ್ಟ್ರೀಯ ಖನಿಜ ಪರಿಶೋಧನಾ ಟ್ರಸ್ಟ್, ಭಾರತ ಸರ್ಕಾರದ ಗಣಿ ಸಚಿವಾಲಯ, ಕರ್ನಾಟಕ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ದೇಶದ ವಿವಿಧೆಡೆ ಖನಿಜ ಪರಿಶೋಧನೆ ಕಾರ್ಯಗಳು ವಿವಿಧ ಹಂತಗಳಲ್ಲಿ ನಡೆಯುತ್ತಿವೆ. ಕೆಐಒಸಿಎಲ್ ಅಂತಹ ನಾಲ್ಕು ಬ್ಲಾಕ್‌ಗಳಿಗೆ ಜಿ4 ಮಟ್ಟದ ಖನಿಜ (ನಿಕ್ಕೆಲ್, ಲೈಮ್‌ಸ್ಟೋನ್, ಡೋಲೊಮೈಟ್) ಪರಿಶೋಧನಾ ಕಾರ್ಯ ಪೂರ್ಣಗೊಳಿಸಿ ರಾಷ್ಟ್ರೀಯ ಖನಿಜ ಪರಿಶೋಧನಾ ಟ್ರಸ್ಟ್‌ಗೆ ವರದಿ ಸಲ್ಲಿಸಿದೆ. ಜತೆಗೆ ಉತ್ತರ ಕರ್ನಾಟಕದಲ್ಲಿ ಕರ್ನಾಟಕ ಸರ್ಕಾರದಿಂದ ಮಂಜೂರಾದ 10 ಕಬ್ಬಿಣ ಮತ್ತು ಮ್ಯಾಂಗನೀಸ್ ಬ್ಲಾಕ್‌ಗಳಲ್ಲಿ ಜಿ2, ಜಿ3 ಮಟ್ಟದ ಪರಿಶೋಧನೆ ಕಾರ್ಯ ಪ್ರಗತಿಯಲ್ಲಿವೆ ಎಂದು ವಿವರಿಸಿದರು.

ಮಂಗಳೂರು ಕೆಐಒಸಿಎಲ್‌ನಲ್ಲಿ ಬ್ಲಾಸ್ಟ್ ರ್ನೇಸ್ ಯುನಿಟ್ ಮರು ಕಾರ್ಯಾರಂಭಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು, ಕೊರೋನಾದಿಂದಾಗಿ ಇದರ ಟೆಂಡರ್ ಪ್ರಕ್ರಿಯೆ ಸ್ವಲ್ಪ ವಿಳಂಬವಾಗಿದೆ. ಇದರೊಂದಿಗೆ ಹೊಸ ಕೋಕ್ ಓವನ್ ಪ್ಲಾಂಟ್ ಹಾಗೂ ಡಕ್ಟೈಲ್ ಐಯರ್ನ್ ಸ್ಪನ್ ಪೈಪ್ ಘಟಕವನ್ನೂ ಸ್ಥಾಪಿಸಲಾಗುವುದು. ಇನ್ನೆರಡು ವರ್ಷದೊಳಗೆ ಈ ಎಲ್ಲ ಅಭಿವದ್ಧಿ ಕಾರ್ಯಗಳು ಪೂರ್ಣಗೊಂಡು ಕಾರ್ಯಾರಂಭವಾಗಲಿವೆ ಎಂದು ಸಾಮಿನಾಥನ್ ತಿಳಿಸಿದರು.

ಕೆಐಒಸಿಎಲ್ ತಯಾರಿಸುವ ಉನ್ನತ ದರ್ಜೆಯ ಕಬ್ಬಿಣದ ಉಂಡೆಗಳಿಗೆ ದೇಶೀಯ ಮತ್ತು ಜಾಗತಿಕ ಮಾರುಕಟ್ಟೆ ವಿಸ್ತಾರಗೊಳಿಸಲು ಪ್ರಯತ್ನ ಮುಂದುವರಿದಿದೆ. ಬ್ರೆಝಿಲ್, ಓಮನ್, ಮಲೇಷ್ಯಾ ಮತ್ತಿತರ ದೇಶಗಳಲ್ಲಿ ಚೀನಾದ ಮಾರುಕಟ್ಟೆ ಪಾಲು ಶೇ.44ರಷ್ಟಿದ್ದರೂ, ಅಲ್ಲಿ ಮಾರುಕಟ್ಟೆ ವಿಸ್ತರಣೆಗೆ ಪ್ರಯತ್ನಿಸಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೆ ಐಒಸಿಎಲ್ ಅಧಿಕಾರಿಗಳಾದ ಎಸ್.ಮುರುಗೇಶ್, ರಾಮಕೃಷ್ಣ ರಾವ್, ಮುರಳೀಧರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News