ಮೈಕ್ರೋ ಫೈನಾನ್ಸ್‌ಗಳಿಂದ ಸುಳ್ಳು ಕೇಸ್ ದಾಖಲಿಸಿ ಮಹಿಳೆಯರಿಗೆ ಬೆದರಿಕೆ: ಆರೋಪ

Update: 2021-09-17 14:03 GMT

ಉಡುಪಿ : ಕೇಂದ್ರ ಸರಕಾರ ಮಹಿಳಾ ಸಲೀಕರಣ ಹಾಗೂ ನಿರುದ್ಯೋಗ ನಿವಾರಣೆಗಾಗಿ ಕೆಲವು ಕಂಪೆನಿಗಳಿಗೆ ರಿಸರ್ವ್ ಬ್ಯಾಂಕ್ ಮೂಲಕ ಲೈಸೆನ್ಸ್ ನೀಡಿ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ ಮೈಕ್ರೋ ಫೈನಾನ್ಸ್‌ಗಳು ಎಲ್ಲ ಕಾನೂನು ಹಾಗೂ ನಿಯಮಗಳನ್ನು ಗಾಳಿಗೆ ತೂರಿ ಮಹಿಳಾ ಸಬಲೀಕರಣ ಬದಲು ಮಹಿಳೆಯರನ್ನು ಬೀದಿ ಪಾಲು ಮಾಡಲು ಹೊರಟಿದೆ ಎಂದು ಕರ್ನಾಟಕ ರಾಜ್ಯ ಋಣಮುಕ್ತ ಹೋರಾಟ ಸಮಿತಿ ಆರೋಪಿಸಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯಾಧ್ಯಕ್ಷ ಬಿ.ಎಂ.ಭಟ್, ಬ್ರಹ್ಮಾವರದ ಮಹಿಳೆಯೊಬ್ಬರ ವಿರುದ್ಧ ಬಿಎಸ್‌ಎಸ್ ಮೈಕ್ರೋ ಫೈನಾನ್ಸ್‌ನವರು ಕೋರ್ಟ್‌ನಲ್ಲಿ ಸುಳ್ಳು ಕೇಸ್ ದಾಖಲಿಸಿದೆ. ಈ ಮಹಿಳೆಗೆ ಕೋರ್ಟ್ ನೋಟೀಸ್ ಕೂಡ ಸಿಗದಂತೆ ಮಾಡಿ ಎಕ್ಸ್‌ಪರ್ಟಿ ಜಪ್ತಿ ಆದೇಶ ಪಡೆದಿದ್ದು, ಅದರಂತೆ ಮಹಿಳೆಯ ಮನೆಗೆ ಪೊಲೀಸ್ ಹಾಗೂ ಕೋರ್ಟ್ ಸಿಬ್ಬಂದಿ ಜೊತೆ ಫೈನಾನ್ಸ್ ಸಿಬಂದಿ ಹೋಗಿ ಬೆದರಿಸಿ, ಆಕೆಯ ಕರಿಮಣಿ ಸರ ಅಡವಿರಿಸಿ ಹಣ ಪಡೆದುಕೊಂಡಿದೆ ಎಂದು ಅವರು ಆರೋಪಿಸಿದರು.

ಈ ಇಡೀ ಪ್ರಕರಣವನ್ನು ಫೈನಾನ್ಸ್ ಸಿಬ್ಬಂದಿ ವಿಡಿಯೋ ಮಾಡಿ, ರಾಜ್ಯದ ಇತರ ಎಲ್ಲ ಮಹಿಳೆಯರಿಗೆ ತೋರಿಸಿ ಹಣ ವಸೂಲಿ ಮಾಡುವ ದಂಧೆಗೆ ಇಳಿದಿದೆ. ಈ ಬಗ್ಗೆ ಸಮಿತಿಯಿಂದ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅದರಂತೆ ಫೈನಾನ್ಸ್‌ನ ಏಳು ಮಂದಿ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿ ಕ್ರಮ ತೆಗೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರ 2013ರಲ್ಲಿ ಲೋಕಸಭೆಯಲ್ಲಿ ಮಂಡಿಸಿದ ಖಾಸಗಿ ಬಿಲ್ ಜಾರಿಗೆ ತರುವ ಮೂಲಕ ಮಹಿಳೆಯರನ್ನು ವಂಚಿಸುತ್ತಿರುವ ಮೈಕ್ರೋ ಫೈನಾನ್ಸ್‌ಗಳನ್ನು ಮಟ್ಟ ಹಾಕಬೇಕಾಗಿದೆ. ಸರಕಾರ ಮಹಿಳೆಯರ ಸಂಕಷ್ಟವನ್ನು ಅರ್ಥ ಮಾಡಿಕೊಂಡು ಮೈಕ್ರೋ ಫೈನಾನ್ಸ್‌ಗಳಲ್ಲಿ ಮಾಡಿರುವ ಸಾಲಗಳನ್ನು ಮನ್ನಾ ಮಾಡಿ ಋಣಮುಕ್ತರನ್ನಾಗಿಸಬೇಕು. ಮೈಕ್ರೋ ಫೈನಾನ್ಸ್‌ಗಳ ಅವ್ಯವಹಾರದ ಕುರಿತು ತನಿಖೆ ನಡೆಸಿ ಕಾನೂನು ಬಾಹಿರ ಕೆಲಸಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಮತ್ತು ಮಹಿಳಾ ದೌರ್ಜನ್ಯವನ್ನು ತಡೆಯಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಮಂಜುನಾಥ್ ಬೈಲೂರು, ಜಿಲ್ಲಾ ಕಾರ್ಯದರ್ಶಿ ಭಾಗ್ಯಲಕ್ಷ್ಮೀ, ಮಹಿಳಾ ಸಂಚಾಲಕಿ ಮಮತಾ, ಕೋಶಾಧಿಕಾರಿ ಆನಂದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News