ಸಾಹಿತಿ ಕೆ.ಸತ್ಯನಾರಾಯಣ ಕೃತಿಗೆ ವಿ.ಎಂ.ಇನಾಂದಾರ್ ಪ್ರಶಸ್ತಿ

Update: 2021-09-17 15:35 GMT
ಸತ್ಯನಾರಾಯಣ

ಉಡುಪಿ, ಸೆ.17: ಕನ್ನಡದ ಖ್ಯಾತ ವಿಮರ್ಶಕ ಪ್ರೊ.ವಿ.ಎಂ.ಇನಾಂದಾರ್ ನೆನಪಿನಲ್ಲಿ ನೀಡುವ 2020ನೇ ಸಾಲಿನ ‘ಇನಾಂದಾರ್ ಪ್ರಶಸ್ತಿ’ಗೆ ಕನ್ನಡದ ಹಿರಿಯ ಲೇಖಕ, ಸಾಹಿತಿ ಹಾಗೂ ಕಾದಂಬರಿಕಾರ ಕೆ. ಸತ್ಯನಾರಾಯಣ ಇವರ ’ಚಿನ್ನಮ್ಮನ ಲಗ್ನ 1893’ ಪುಸ್ತಕ ಆಯ್ಕೆಯಾಗಿದೆ ಎಂದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.

ಸೆ.24ರಂದು ನಡೆಯುವ ಎಂಜಿಎಂ ಕಾಲೇಜಿನ ವಾರ್ಷಿಕ ಸಾಹಿತ್ಯೋತ್ಸವದ ಸಂದರ್ಭದಲ್ಲಿ ಕೆ. ಸತ್ಯನಾರಾಯಣ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
     
ಕೆ. ಸತ್ಯನಾರಾಯಣ ಅವರು ಕನ್ನಡದ ಬಹುಮುಖ ಪ್ರತಿಭೆಯ ಲೇಖಕ. ಅವರು ಕತೆ, ಕಾದಂಬರಿ, ವಿಮರ್ಶೆ, ಅನುವಾದ, ಸಂಪಾದನೆ ಮೊದಲಾದ ಕ್ಷೇತ್ರಗಳಲ್ಲಿ ವಿಶೇಷ ಆಸಕ್ತಿ ಮತ್ತು ಪರಿಶ್ರಮವುಳ್ಳವರು. ‘ನಿಮ್ಮ ಮೊದಲ ಪ್ರೇಮದ ಕಥೆ’, ನಕ್ಸಲ್ ವರಸೆ, ಹೆಗ್ಗುರುತು, ದಲಿತರ ನಮ್ಮ ಕಥೆಗಳು, ಚಿತ್ರಗುಪ್ತನ ಕಥೆಗಳು (ಸಣ್ಣಕತೆಗಳು) ನಮ್ಮ ಪ್ರೀತಿಯ ಕ್ರಿಕೆಟ್, ದಾಂಪತ್ಯಕೊಂದು ಶೀಲ, ಲೋಕ ಪ್ರಬಂಧ (ಪ್ರಬಂಧಗಳು), ಗೌರಿ,ಸನ್ನಿಧಾನ, ಕಾಲಜಿಂಕೆ, ವಿಕಲ್ಪ (ಕಾದಂಬರಿಗಳು), ಆಸಕ್ತಿ, ಮನೋಧರ್ಮ, ಖಾಸಗಿ ವಿಮರ್ಶೆ, ಮರುಕಳಿಸಿದ ಮಾರ್ದವತೆ, ಕಾರಂತರ ಕಾದಂಬರಿಗಳಲ್ಲಿ ದುಡಿಮೆ, ಮಹಾಕಥನದ ಮಾಸ್ತಿ, ಅವರವರ ಭವಕ್ಕೆ ಮುಂತಾದ ವಿಮರ್ಶಾ ಕೃತಿಗಳನ್ನೂ ರಚಿಸಿದ್ದಾರೆ.

ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಇವರ ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಮಾಸ್ತಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್, ವಿಶ್ವಚೇತನ ಪ್ರಶಸ್ತಿ, ಭಾರತೀಸುತ ದತ್ತಿ ನಿಧಿ ಪ್ರಶಸ್ತಿಗಳು ಲಭಿಸಿವೆ.

1954ರಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಕೊಪ್ಪ ಗ್ರಾಮದಲ್ಲಿ ಜನಿಸಿದ ಕೆ. ಸತ್ಯನಾರಾಯಣ ಇವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಆದಾಯ ತೆರಿಗೆ ಇಲಾಖೆಯಲ್ಲಿ ಸುಮಾರು 36 ವರ್ಷಗಳ ಸೇವೆ ಸಲ್ಲಿಸಿ ಪ್ರಧಾನ ಮುಖ್ಯ ಆಯುಕ್ತರಾಗಿ ಸೇವಾ ನಿವೃತ್ತರಾಗಿದ್ದಾರೆ.­

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News