ಉಡುಪಿ: ಮೆಗಾ ಲಸಿಕಾ ವಿತರಣೆಯಲ್ಲಿ 49,699 ಮಂದಿಗೆ ಲಸಿಕೆ

Update: 2021-09-17 15:48 GMT

ಉಡುಪಿ, ಸೆ.17: ಜಿಲ್ಲೆಯಲ್ಲಿ ಶುಕ್ರವಾರ ನಡೆದ ಮೆಗಾ ಲಸಿಕಾ ಮೇಳದಲ್ಲಿ ಜಿಲ್ಲೆಯ ಒಟ್ಟು 308 ಲಸಿಕಾ ಕೇಂದ್ರಗಳಲ್ಲಿ 18 ವರ್ಷ ಮೇಲ್ಪಟ್ಟ ಒಟ್ಟು 49699 ಮಂದಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಅವರು ತಿಳಿಸಿದ್ದಾರೆ.

ದಿನದಲ್ಲಿ ಒಟ್ಟು 80,000 ಡೋಸ್ ಲಸಿಕೆಯನ್ನು ವಿತರಿಸುವ ಗುರಿ ಇದ್ದಿದ್ದು, ರಾತ್ರಿ 8:00ಗಂಟೆಯವರೆಗೆ ಸುಮಾರು 49,699 ಮಂದಿಗೆ ಲಸಿಕೆ ನೀಡಿ ಶೇ.62ರ ಸಾಧನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಂದು ದಿನದಲ್ಲಿ ವಿತರಿಸಿರುವ ಅತೀ ಹೆಚ್ಚಿನ ಡೋಸ್ ಲಸಿಕೆ ಇದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿ ನಿನ್ನೆಯವರೆಗೆ ಶೇ.84.97ರಷ್ಟು ಮೊದಲ ಡೋಸ್ ಹಾಗೂ ಶೇ.35.2ರಷ್ಟು ಎರಡನೇ ಡೋಸ್ ಲಸಿಕೆಯನ್ನು ವಿತರಿಸಲಾಗಿದೆ ಎಂದವರು ತಿಳಿಸಿದ್ದಾರೆ. ಲಸಿಕಾಕರಣದ ಯಶಸ್ಸಿಗೆ ಸಹಕರಿಸಿದ ಸಾರ್ವಜನಿಕರು,ಸಂಘಸಂಸ್ಥೆ ಗಳು, ಜನಪ್ರತಿನಿಧಿಗಳು ಹಾಗೂ ಸರಕಾರಿ ಮತ್ತು ಖಾಸಗಿ ವೈದ್ಯ ಸಿಬ್ಬಂದಿಗಳಿಗೆ ಜಿಲ್ಲಾದಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.

ಇಂದು ಜಿಲ್ಲೆಯಲ್ಲಿ 18 ವರ್ಷದಿಂದ 44 ವರ್ಷದೊಳಗಿನ 15067 ಮಂದಿ ಮೊದಲ ಡೋಸ್ ಹಾಗೂ 10,991 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದರೆ, 45 ವರ್ಷ ಮೇಲಿನ 8918 ಮಂದಿ ಮೊದಲ ಡೋಸ್ ಹಾಗೂ 14299 ಮಂದಿ ಎರಡನೇ ಡೋಸ್ ಲಸಿಕೆ ಸ್ವೀಕರಿಸಿದ್ದಾರೆ. ಅಲ್ಲದೇ 70 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 162 ಮಂದಿ ಮುಂಚೂಣಿ ಕಾರ್ಯಕರ್ತರು ಸಹ ಇಂದು ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News