ಪಡುಬಿದ್ರಿಗೆ ಟೋಲ್‍ನಲ್ಲಿ ವಿನಾಯಿತಿ ಆಗ್ರಹಿಸಿ ಮನವಿ

Update: 2021-09-17 15:59 GMT

ಪಡುಬಿದ್ರಿ: ಹೆಜಮಾಡಿ ಟೋಲ್‍ನ 5 ಕಿಮೀ ಸುತ್ತಮುತ್ತ ಪ್ರದೇಶದ ಪಡುಬಿದ್ರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾಹನಗಳಿಗೆ ಟೋಲ್ ವಿನಾಯಿತಿ ನೀಡುವಂತೆ ಒತ್ತಾಯಿಸಿ ಪಡುಬಿದ್ರಿ ಜಾಗೃತ ನಾಗರಿಕ ಸಮಿತಿ  ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಕುತ್ಯಾರಿನಲ್ಲಿ ಶುಕ್ರವಾರ ಮನವಿ ಪತ್ರ ನೀಡಿದರು.

ಉಡುಪಿ ಜಿಲ್ಲೆಯು ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ನಿತ್ಯ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಶಾಲಾ ಕಾಲೇಜುಗಳೂ ಉಭಯ ಜಿಲ್ಲೆಗಳ ಗಡಿಭಾಗಗಳಲ್ಲಿ ಹಂಚಿಕೊಂಡಿದೆ. ಮುಖ್ಯವಾಗಿ ವ್ಯಾವಹಾರಿಕ ಮಾತ್ರವಲ್ಲದೆ ಕೌಟಂಬಿಕ ಸಂಬಂಧಗಳೂ ಉಭಯ ಜಿಲ್ಲೆಗಳಲ್ಲಿ ಹಾಸುಹೊಕ್ಕಾಗಿದೆ. ಈ ನಿಟ್ಟಿನಲ್ಲಿ ನಿತ್ಯ ದುಬಾರಿ ಟೋಲ್ ಪಾವತಿಸಿ ತೆರಳಬೇಕಾಗಿರುವುದು ತೀವ್ರ ಸಮಸ್ಯೆಯಂಟಾಗಿದೆ ಎಂದು ಪಡುಬಿದ್ರಿ ಜಾಗೃತ ನಾಗರಿಕ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ ಸಚಿವರಿಗೆ ಮನವರಿಕೆ ಮಾಡಿದರು.

ಈ ಬಗ್ಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಹೆಜಮಾಡಿಯ ನವಯುಗ್ ಟೋಲ್‍ನಲ್ಲಿ ಪಡುಬಿದ್ರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಾಹನ ಗಳಿಗೆ ಟೋಲ್ ವಿನಾಯಿತಿ ನೀಡುವ ಬಗ್ಗೆ ಹೆದ್ದಾರಿ ಇಲಾಖೆ ಹಾಗೂ ಗುತ್ತಿಗೆದಾರರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಶೆಟ್ಟಿ, ಪಡುಬಿದ್ರಿ ಜಾಗೃತ ನಾಗರಿಕ ಸಮಿತಿ ಪದಾಧಿಕಾರಿಗಳಾದ ಗಣೇಶ್ ಕೋಟ್ಯಾನ್, ನವೀನ್‍ ಚಂದ್ರ ಜೆ.ಶೆಟ್ಟಿ, ರಮೀಝ್ ಹುಸೈನ್, ನೀತಾ ಗುರುರಾಜ್, ನಿಯಾಜ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಸುಧಾಕರ ಶೆಟ್ಟಿ ಹಸನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News