ಮ್ಯಾನ್ಮಾರ್: ಆಂಗ್ ಸಾನ್ ಸುಕಿ ವಿರುದ್ಧದ ಭ್ರಷ್ಟಾಚಾರ ಆರೋಪದ ವಿಚಾರಣೆಗೆ ನಿರ್ಧಾರ

Update: 2021-09-17 17:50 GMT
photo: AP/PTI file photo

ಯಾಂಗ್ಯಾನ್, ಸೆ.17: ಮ್ಯಾನ್ಮಾರ್‌ ನ ಪದಚ್ಯುತ ಮುಖಂಡೆ ಆಂಗ್ಸ್ಯಾನ್ ಸುಕಿಯನ್ನು ಭ್ರಷ್ಟಾಚಾರದ ಆರೋಪದ ಮೇಲೆ ವಿಚಾರಣೆಗೆ ಒಳಪಡಿಸಲು ಅಲ್ಲಿನ ಸೇನಾಡಳಿತ ನಿರ್ಧರಿಸಿದ್ದು ಅವರ ವಿರುದ್ಧದ ಹಲವು ಆರೋಪಗಳು ಸಾಬೀತಾದರೆ ದಶಕಗಳಿಗೂ ಅಧಿಕ ವರ್ಷ ಜೈಲುಶಿಕ್ಷೆಗೆ ಗುರಿಯಾಗಬಹುದು ಎಂದು ಮೂಲಗಳು ಹೇಳಿವೆ.

ಫೆಬ್ರವರಿಯಲ್ಲಿ ಸೇನೆ ನಡೆಸಿದ ಕ್ಷಿಪ್ರಕ್ರಾಂತಿಯಲ್ಲಿ 76 ವರ್ಷದ ಸ್ಯುಕಿ ನೇತೃತ್ವದ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷದ ಸರಕಾರವನ್ನು ಪದಚ್ಯುತಗೊಳಿಸಿ ಸ್ಯುಕಿಯನ್ನು ಗೃಹಬಂಧನದಲ್ಲಿರಿಸಲಾಗಿದೆ. ಸೇನಾಕ್ರಾಂತಿಯನ್ನು ವಿರೋಧಿಸಿ ದೇಶದಲ್ಲಿ ಭುಗಿಲೆದ್ದ ಪ್ರತಿಭಟನೆಯನ್ನು ಸೇನೆ ಬಲಪ್ರಯೋಗಿಸಿ ಹತ್ತಿಕ್ಕಿದ್ದು 1,100ಕ್ಕೂ ಹೆಚ್ಚು ಮಂದಿ ಮೃತರಾಗಿ 8000ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಎನ್ಜಿಒ ಸಂಘಟನೆಯೊಂದು ವರದಿ ಮಾಡಿದೆ.

 ಕಳೆದ ವರ್ಷ ಮ್ಯಾನ್ಮಾರ್ ನಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆ ಸಂದರ್ಭ ಕೊರೋನ ಸೋಂಕಿನ ಕಾರಣಕ್ಕೆ ನಿರ್ಬಂಧ ಜಾರಿಗೊಳಿಸಿರುವುದು, ಅಕ್ರಮವಾಗಿ ವಾಕಿಟಾಕಿಗಳನ್ನು ಆಮದು ಮಾಡಿಕೊಂಡಿರುವುದು ಹಾಗೂ ದೇಶದ್ರೋಹ - ಈ ಮೂರು ಪ್ರಕರಣಗಳಲ್ಲಿ ಸ್ಯುಕಿ ವಿರುದ್ಧ ವಿಚಾರಣೆ ಈಗ ನಡೆಯುತ್ತಿದೆ. ಸ್ಯುಕಿ ವಿರುದ್ಧ ದಾಖಲಿಸಿರುವ 4 ಭ್ರಷ್ಟಾಚಾರ ಆರೋಪದ ವಿಚಾರಣೆ ಅಕ್ಟೋಬರ್ 1ರಿಂದ ರಾಜಧಾನಿ ನೇಪಿಡಾವ್‌ನಲ್ಲಿ ಆರಂಭವಾಗಲಿದೆ. ಆರೋಪ ಸಾಬೀತಾದರೆ ಪ್ರತೀ ಅಪರಾಧಕ್ಕೆ ಗರಿ ಗರಿಷ್ಠ ತಲಾ 15 ರ್ಷಗಳ ಜೈಲುಶಿಕ್ಷೆ ವಿಧಿಸಬಹುದಾಗಿದೆ.

 ಇದರ ಜೊತೆಗೆ, ಚಿನ್ನದ ಅಕ್ರಮ ಪಾವತಿಗಳನ್ನು ಸ್ವೀಕರಿಸಿರುವುದು ಹಾಗೂ ಸರಕಾರಿ ರಹಸ್ಯ ಕಾಯ್ದೆಯನ್ನು ಉಲ್ಲಂಸಿದ ಆರೋಪವೂ ಇವರ ಮೇಲಿದೆ. ಇದರ ವಿಚಾರಣೆ ಇನ್ನೂ ಆರಂಭವಾಗಿಲ್ಲ. 2023ರ ಆಗಸ್ಟ್‌ನೊಳಗೆ  ದೇಶದಲ್ಲಿ ಹೊಸ ಸಾರ್ವತ್ರಿಕ ಚುನಾವಣೆ ನಡೆಸಿ ತುರ್ತು ಪರಿಸ್ಥಿತಿಯನ್ನು ತೆರವುಗೊಳಿಸಲಾಗುವುದು ಎಂದು ಸೇನಾಡಳಿತದ ಮುಖ್ಯಸ್ಥ ಮಿನ್ ಆಂಗ್ ಹಿಯಾಂಗ್ ಕಳೆದ ತಿಂಗಳು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News