ಗಡಿಭಾಗದಿಂದ ಸೇನೆಗಳ ವಾಪಸಾತಿ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಪೂರಕ: ಜೈಶಂಕರ್

Update: 2021-09-17 17:19 GMT

ದುಶಾಂಬೆ, ಸೆ.17: ಗಡಿಭಾಗದಲ್ಲಿರುವ ಸೇನಾಪಡೆಯ ವಾಪಸಾತಿ ಭಾರತ -ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಪೂರಕವಾಗಲಿದೆ ಎಂದು ಭಾರತದ ವಿದೇಶ ವ್ಯವಹಾರ ಇಲಾಖೆ ಸಚಿವ ಜೈಶಂಕರ್ ಹೇಳಿದ್ದಾರೆ.

ದುಷಾಂಬೆಯಲ್ಲಿ ಗುರುವಾರ ನಡೆದ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಭಾರತ-ಚೀನಾ ವಿದೇಶ ವ್ಯವಹಾರ ಸಚಿವರು ಶೃಂಗಸಭೆಯ ನೇಪಥ್ಯದಲ್ಲಿ ದ್ವಿಪಕ್ಷೀಯ ಸಂಬಂಧದ ಬಗ್ಗೆ ಚರ್ಚಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.

‘ಚೀನಾದ ವಿದೇಶ ವ್ಯವಹಾರ ಸಚಿವ ವಾಂಗ್ ಯಿ ಅವರೊಂದಿಗೆ ಗಡಿಭಾಗದಿಂದ ಸೇನಾಪಡೆ ಹಿಂಪಡೆಯುವ ವಿಷಯದ ಬಗ್ಗೆ ಚರ್ಚೆ ನಡೆಸಿದ್ದು, ಈ ವಿಷಯದಲ್ಲಿ ಇನ್ನಷ್ಟು ಪ್ರಗತಿ ಸಾಧ್ಯವಾದರೆ ಗಡಿಪ್ರದೇಶದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿದೆ. ಇದರಿಂದ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ದೃಢಗೊಳ್ಳುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಜೊತೆಗೆ ಇತ್ತೀಚಿನ ಜಾಗತಿಕ ಬೆಳವಣಿಗೆಯ ವಿಷಯದಲ್ಲೂ ವಾಂಗ್ ಯಿ ಜತೆ ಚರ್ಚಿಸಿದ್ದೇವೆ’ ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.

 ಭಾರತದ ಪ್ರಮುಖ ಪ್ರತಿಸ್ಪರ್ಧಿ ಪಾಕಿಸ್ತಾನದೊಂದಿಗೆ ಚೀನಾವು ಸೇನಾ ಸಹಕಾರ ಒಪ್ಪಂದ ಮಾಡಿಕೊಂಡಿರುವುದು ಭಾರತಕ್ಕೆ ಆತಂಕದ ವಿಷಯವಾಗಿದ್ದರೂ, ಭಾರತ-ಚೀನಾ ಸಂಬಂಧವನ್ನು ದ್ವಿಪಕ್ಷೀಯ ನೆಲೆಯಲ್ಲಿ ಮಾತ್ರ ಗಮನಿಸಬೇಕು. ಇದೇ ವೇಳೆ ಚೀನಾ ಕೂಡಾ ಭಾರತದೊಂದಿಗಿನ ಸಂಬಂಧವನ್ನು ಮೂರನೇ ದೇಶದ ಕನ್ನಡಕದಲ್ಲಿ ವೀಕ್ಷಿಸಬಾರದು ಎಂದು ಜೈಶಂಕರ್ ಹೇಳಿದರು.
 
ಚೀನಾ ಯಾವತ್ತೂ ಭಾರತ-ಚೀನಾ ಗಡಿ ವಿವಾದವನ್ನು ಸೂಕ್ತವಾಗಿ ಮತ್ತು ಸಕಾರಾತ್ಮಕ ಧೋರಣೆಯಿಂದ ನಿರ್ವಹಿಸಿದೆ. ಗಡಿಭಾಗದಲ್ಲಿ ಶಾಂತಿ, ನೆಮ್ಮದಿ ನೆಲೆಸಬೇಕಿದ್ದರೆ ಎರಡೂ ದೇಶಗಳು ಜತೆಗೂಡಿ ಕಾರ್ಯನಿರ್ವಹಿಸಬೇಕು ಮತ್ತು ಗಡಿಭಾಗದಲ್ಲಿ ಉದ್ಭವಿಸಿದ್ದ ಸಮಸ್ಯೆ ಮತ್ತೆ ತಲೆಎತ್ತದಂತೆ ಕ್ರಮ ಕೈಗೊಳ್ಳಬೇಕು ಎಂದು ವಾಂಗ್ ಯಿ ಹೇಳಿದರು ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News