ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Update: 2021-09-18 07:51 GMT

ಮಂಗಳೂರು : ರಾಜ್ಯ ಮತ್ತು ಕೇಂದ್ರ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಸರಕಾರಿ, ಅನುದಾನಿತ ಮತ್ತು ಮಾನ್ಯತೆ ಪಡೆದ ಶಾಲೆಗಳಲ್ಲಿ ಕಲಿಯುತ್ತಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಮಂಜೂರು ಮಾಡಲು ಅರ್ಜಿಯನ್ನು ಆನ್‌ಲೈನ್ ಮೂಲಕ ಆಹ್ವಾನಿಸಲಾಗಿದೆ.

1ನೇ ತರಗತಿಯಿಂದ 10ನೇ ತರಗತಿಯವರೆಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಆನ್‌ಲೈನ್ ಮೂಲಕ
www.scholarships.gov.in ನಲ್ಲಿ ಸಲ್ಲಿಸಬೇಕು.

ವಿದ್ಯಾರ್ಥಿಯ ಪಾಲಕರ ವಾರ್ಷಿಕ ಆದಾಯ 1 ಲಕ್ಷ ರೂ.ಒಳಗಿರಬೇಕು ಹಾಗೂ ಹೊಸ ಮತ್ತು ನವೀಕೃತ ಅರ್ಜಿ ಸಲ್ಲಿಸಲು ನವೆಂಬರ್ 15 ಕೊನೆಯ ದಿನಾಂಕವಾಗಿರುತ್ತದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಪ್ರಿಂಟ್ ಪ್ರತಿಯನ್ನು ನಮೂದಿಸಿದ ಎಲ್ಲಾ ದಾಖಲೆಯೊಂದಿಗೆ ಎರಡು ಪ್ರತಿಗಳಲ್ಲಿ ಶಾಲೆಯ ಮುಖ್ಯ ಶಿಕ್ಷಕರಿಗೆ ಸಲ್ಲಿಸಬೇಕು. ಶಾಲೆಯ ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳಿಂದ ಸ್ವೀಕರಿಸಿದ ಎರಡು ಪ್ರತಿಗಳಲ್ಲಿ, ಒಂದು ಪ್ರತಿಯನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸಲ್ಲಿಸುವುದು. ಎನ್‌ಎಸ್‌ಪಿ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಕಡ್ಡಾಯವಾಗಿ ರಾಜ್ಯ ವಿದ್ಯಾರ್ಥಿವೇತನ (ಎಸ್‌ಎಸ್‌ಪಿ) ಪೊರ್ಟಲ್‌ನಲ್ಲಿಯೂ ಕೂಡ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಇಲ್ಲವಾದಲ್ಲಿ ವಿದ್ಯಾರ್ಥಿವೇತನ ಮಂಜೂರುಗೊಳ್ಳುವುದಿಲ್ಲ.

ಮೆಟ್ರಿಕ್ ನಂತರದ ಹಾಗೂ ಮೆರಿಟ್-ಕಂ-ಮೀನ್ಸ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಕರ್ನಾಟಕ ಮತ್ತು ಕೇಂದ್ರ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಸರಕಾರಿ, ಅನುದಾನಿತ ಮತ್ತು ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಕಲಿಯುತ್ತಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ, ಮೆಟ್ರಿಕ್ ನಂತರದ ಹಾಗೂ ಮೆರಿಟ್-ಕಂ-ಮೀನ್ಸ್ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪಿಯುಸಿ, ಪದವಿ, ಸ್ನಾತಕೋತ್ತರ ಹಾಗೂ ಪಿಎಚ್‌ಡಿಯವರೆಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಆನ್‌ಲೈನ್ ಮೂಲಕ www.scholarships.gov.in ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಹೊಸ ಹಾಗೂ ನವೀಕೃತ ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನಾಂಕವಾಗಿರುತ್ತದೆ. ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯನ 2 ಲಕ್ಷ ರೂ.ನೊಳಗಿರಬೇಕು.

ತಾಂತ್ರಿಕ ಹಾಗೂ ವಿವಿಧ ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೆರಿಟ್-ಕಂ-ಮೀನ್ಸ್ ವಿದ್ಯಾರ್ಥಿ ವೇತನಕ್ಕೆ ಆನ್‌ಲೈನ್ ಮೂಲಕ www.scholarships.gov.in ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಹೊಸ ಹಾಗೂ ನವೀಕೃತ ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನಾಂಕವಾಗಿರುತ್ತದೆ. ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯನ 2.50 ಲಕ್ಷ ರೂ. ನೊಳಗಿರಬೇಕು.

ಆನ್‌ಲೈನ್‌ನಲ್ಲಿ ಸಲ್ಲಿಸಿದ ನಂತರ ಅರ್ಜಿಯನ್ನು ಪ್ರಿಂಟ್ ಪಡೆದು ನಮೂದಿಸಿದ ದಾಖಲೆಯೊಂದಿಗೆ ಒಂದು ಪ್ರತಿಯನ್ನು ಕಾಲೇಜಿಗೆ ಸಲ್ಲಿಸಬೇಕು. ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದ ಪ್ರತಿಯನ್ನು ಅಲ್ಪಸಂಖ್ಯಾತರ ಇಲಾಖೆಗೆ ಸಲ್ಲಿಸುವ ಅಗತ್ಯರುವಿವುದಿಲ್ಲ. ಎನ್‌ಎಸ್‌ಪಿ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಕಡ್ಡಾಯವಾಗಿ ರಾಜ್ಯ ವಿದ್ಯಾರ್ಥಿ ವೇತನ (ಎಸ್‌ಎಸ್‌ಪಿ) ಪೋರ್ಟಲ್‌ನಲ್ಲಿಯೂ ಅರ್ಜಿ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ವಿದ್ಯಾರ್ಥಿ ವೇತನ ಮಂಜೂರುಗೊಳ್ಳುವುದಿಲ್ಲ.

ಈ ಬಗ್ಗೆ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವೆಬ್‌ಸೈಟ್ dom.karnataka.gov.in/ dakshina_kannada/public ಹಾಗೂ ಅಲ್ಪಸಂಖ್ಯಾತರ ಸಹಾಯವಾಣಿ ನಂ. 8277799990ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News