ಅನಿಲ್‌ ದೇಶ್‌ ಮುಖ್‌ ಟಿಆರ್ಪಿ ಹಗರಣದಲ್ಲಿ ಅರ್ನಬ್‌ ಗೋಸ್ವಾಮಿಯನ್ನು ಬಂಧಿಸಲು ಬಯಸಿದ್ದರು: ಸಚಿನ್‌ ವಾಝೆ ಹೇಳಿಕೆ

Update: 2021-09-18 08:12 GMT

ಮುಂಬೈ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರು ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಯನ್ನು ಟಿಆರ್‍ಪಿ ಹಗರಣದಲ್ಲಿ ಬಂಧಿಸಬೇಕೆಂದು ಬಯಸಿದ್ದರು ಎಂದು ಅಮಾನತುಗೊಂಡಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಅವರು ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ದೇಶಮುಖ್ ಮತ್ತು ಇತರರ ವಿರುದ್ಧ ಇರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಝೆ ಅವರ ಈ ಹೇಳಿಕೆ ಬಂದಿದೆ.

ದೇಶಮುಖ್ ಅವರು ಮುಂಬೈ ಬಾರ್ ಮತ್ತು ರೆಸ್ಟಾರೆಂಟ್ ಮಾಲಕರಿಂದ ತಮ್ಮ ಪರವಾಗಿ ಹಣ ವಸೂಲಿ ಮಾಡಲು ಮುಂಬೈ ಪೊಲೀಸ್ ಅಧಿಕಾರಿಗಳನ್ನು ಬಲವಂತಪಡಿಸಿದ್ದಾರೆಂಬ ಆರೋಪಗಳ ಕುರಿತಂತೆ ಸಿಬಿಐ ದಾಖಲಿಸಿದ್ದ ಎಫ್‍ಐಆರ್ ಆಧಾರದಲ್ಲಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ.

ಡಿಸೆಂಬರ್ ಹಾಗೂ ಫೆಬ್ರವರಿ ನಡುವೆ  ಬಾರ್ ಮಾಲೀಕರಿಂದ ಸಂಗ್ರಹಿಸಲಾದ ರೂ 4 ಕೋಟಿಗೂ ಅಧಿಕ ಹಣವನ್ನು ದಿಲ್ಲಿಯ ನಾಲ್ಕು ಶೆಲ್ ಕಂಪೆನಿಗಳ ಮೂಲಕ ದೇಶಮುಖ್ ಅವರಿಗೆ ಸೇರಿದ ನಾಗ್ಪುರ್‍ದಲ್ಲಿರುವ ಚ್ಯಾರಿಟೇಬಲ್ ಟ್ರಸ್ಟಿಗೆ ವರ್ಗಾಯಿಸಲಾಗಿತ್ತು ಎಂದು ಜಾರಿ ನಿರ್ದೇಶನಾಲಯ  ಹೇಳುತ್ತಿದೆ. ಆದರೆ ಇಡಿ ಚಾರ್ಜ್‍ಶೀಟ್‍ನಲ್ಲಿ ದೇಶಪಾಂಡೆ ಹೆಸರು ಉಲ್ಲೇಖವಿಲ್ಲ. ದೇಶಮುಖ್ ಅವರ ಆಪ್ತ ಸಹಾಯಕ ಮತ್ತು ಆಪ್ತ ಕಾರ್ಯದರ್ಶಿ ಸಹಿತ 14 ಆರೋಪಿಗಳಲ್ಲಿ ವಾಝೆ ಕೂಡ ಒಬ್ಬರಾಗಿದ್ದಾರೆ.

ಟಿಆರ್‍ಪಿ ಹಗರಣ, ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದಲ್ಲಿ ಗೋಸ್ವಾಮಿ ಬಂಧನ, ದಿಲೀಪ್ ಛಾಬ್ರಿಯ ಪ್ರಕರಣ ಮತ್ತು ಸಾಮಾಜಿಕ ಜಾಲತಾಣ ನಕಲಿ ಫಾಲೋವರ್ಸ್ ಪ್ರಕರಣದಲ್ಲಿ ದೇಶಪಾಂಡೆ ನೇರವಾಗಿ ತಮಗೆ ಸೂಚನೆಗಳನ್ನು ನೀಡುತ್ತಿದ್ದರೆಂದೂ ವಾಝೆ ತಮ್ಮ ಹೇಳಿಕೆಯಲ್ಲಿ ಜಾರಿ ನಿರ್ದೇಶನಾಲಯಕ್ಕೆ ತಿಳಿಸಿದ್ದಾರೆ.

ರಾಜ್ಯದ ಸಾರಿಗೆ ಸಚಿವ ಹಾಗೂ ದೇಶಮುಖ್ ಅವರು ಆಗಿನ ಮುಂಬೈ ಪೊಲೀಸ್ ಮುಖ್ಯಸ್ಥ ಪರಂ ಬೀರ್ ಸಿಂಗ್ ಅವರ ಹೊರಡಿಸಿದ ವರ್ಗಾವಣೆ ಆದೇಶಗಳನ್ನು ರದ್ದುಗೊಳಿಸಲು 10 ಡಿಸಿಪಿಗಳಿಂದ ರೂ 40 ಕೋಟಿ ಪಡೆದಿದ್ದಾರೆಂದೂ ವಾಝೆ ಆರೋಪಿಸಿದ್ದಾರೆ. ಇದರ ಪೈಕಿ ರೂ 20 ಕೋಟಿಯನ್ನು  ದೇಶಮುಖ್ ಅವರಿಗೆ ಅವರ ಆಪ್ತ ಸಹಾಯಕ ಸಂಜೀವ್ ಪಲಂಡೆ ಹಾಗೂ ಅನಿಲ್ ಪರಬ್ ಮೂಲಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಬಜರಂಗ್ ಕರ್ಮಾಟೆ ಮೂಲಕ ನೀಡಲಾಗಿತ್ತು ಎಂದು ವಾಝೆ ಹೇಳಿದ್ದಾರೆ.

ಆದರೆ ದೇಶಮುಖ್ ಪರವಾಗಿ ಸಂಗ್ರಹಿಸಲಾದ ಹಣದಿಂದ ತಾವು ಏನನ್ನೂ ಪಡೆದುಕೊಂಡಿಲ್ಲ, "ಪೊಲೀಸ್ ಇಲಾಖೆ ಸೇವೆಯಲ್ಲಿ ಪುನಃಸ್ಥಾಪನೆಗೊಂಡ ನಂತರ ನನ್ನ ಹುದ್ದೆಯನ್ನು ಉಳಿಸಿಕೊಳ್ಳುವ  ಅನಿವಾರ್ಯತೆ ಜತೆಗೆ ರಾಜಕೀಯ ಒತ್ತಡದಿಂದ ದೇಶಮುಖ್ ಸೂಚನೆಯಂತೆ ನಡೆದುಕೊಂಡಿದ್ದೆ" ಎಂದೂ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News