ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಯುವತಿಯ ಅಂಗಾಂಗ ದಾನ

Update: 2021-09-18 11:22 GMT
ಕವನಾ

ಮಂಗಳೂರು, ಸೆ.18: ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ಬಳಿ ರಸ್ತೆ ಅಪಘಾತಕ್ಕೀಡಾಗಿ ಮಿದುಳು ನಿಷ್ಕ್ರಿಯಗೊಂಡು ನಗರದ ಎಜೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹಾವೇರಿ ಮೂಲದ ಯುವತಿಯ ಅಂಗಾಂಗಗಳನ್ನು ದಾನ ಮಾಡುವ ಪ್ರಕ್ರಿಯೆ ನಡೆದಿದೆ.

ಹಾವೇರಿ ಜಿಲ್ಲೆಯ ಹಲ್ಲೂರು ಗ್ರಾಮದ 23ರ ಹರೆಯದ ಕವನಾ ಎಂಬಾಕೆ ರಸ್ತೆ ಅಪಘಾತಕ್ಕೀಡಾಗಿದ್ದರು. ಆಕೆಯನ್ನು ಮಂಗಳೂರಿನಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಸೆ. 12ರಂದು ಮಧ್ಯಾಹ್ನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗಂಭೀರವಾಗಿ ಗಾಯಗೊಂಡಿದ್ದ ಕವನಾ ಅವರ ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಮಿದುಳು ನಿಷ್ಕ್ರಿಯಗೊಂಡಿತ್ತು. ಇದನ್ನು ಅರಿತ ಕವನರ ಸಹೋದರಿ ಅವರ ಅಂಗಾಂಗ ದಾನಕ್ಕೆ ಮುಂದಾದರು.

ಆಸ್ಪತ್ರೆಯಿಂದ ಜೀವನ ಸಾರ್ಥಕತೆ: ಕರ್ನಾಟಕ ಸರಕಾರದಿಂದ ಸ್ಥಾಪಿತವಾದ ಮೃತ ದಾನಿ (ಕಾಡವರ್) ಮಾನವ ಅಂಗಾಂಗಗಳ ಕಸಿ ಕಾರ್ಯಕ್ರಮದ ಅನುಷ್ಠಾನವನ್ನು ನೋಡಿಕೊಳ್ಳುವ ಸಂಸ್ಥೆಗೆ ಮಾಹಿತಿ ನೀಡಲಾಯಿತು. ಅದರಂತೆ ದಾನಿಯ ಸಹೋದರಿ, ತಾಯಿ ಹಾಗೂ ಕುಟುಂಬಸಸ್ಥರ ಒಪ್ಪಿಗೆ ಪಡೆದು ಅಂಗಾಂಗ ದಾನ ಪ್ರಕ್ರಿಯೆಯನ್ನು ಎಜೆ ಆಸ್ಪತ್ರೆಯಲ್ಲಿ ನಡೆಸಲಾಯಿತು.

ಜೀವನ ಸಾರ್ಥಕತೆ ಸಂಸ್ಥೆಯ ನಿರ್ದೇಶನದಂತೆ ಒಂದು ಕಿಡ್ನಿಯನ್ನು ಎಜೆ ಆಸ್ಪತ್ರೆಯಲ್ಲಿ ಕಸಿ ಮಾಡಲಾಗಿದೆ. ಲಿವರ್ ಅನ್ನು ಬೆಂಗಳೂರಿನ ಆಸ್ಟರ್ ಸಿಎಂಐ ಬೆಂಗಳೂರಿಗೆ, ಹೃದಯವನ್ನು ಮಣಿಪಾಲ ಆಸ್ಪತ್ರೆ ಎಚ್‌ಎಎಲ್ ಬೆಂಗಳೂರು ಹಾಗೂ ಇನ್ನೊಂದು ಕಿಡ್ನಿ , ಕಣ್ಣು ಮತ್ತು ಚರ್ಮವನ್ನು ಮಣಿಪಾಲ ಉಡುಪಿಯ ಕೆಎಂಸಿ ಆಸ್ಪತ್ರೆಗೆ ನೀಡಲಾಗಿದೆ.

ಎಜೆ ಆಸ್ಪತ್ರೆಯ ಆ್ಯಂಬುಲೆನ್ಸ್‌ನಲ್ಲಿ ಲಿವರ್ ಹಾಗೂ ಹೃದಯವನ್ನು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿನ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News