ಸಹಾಯ ಅರಸಿ ಬರುವವರಿಗೆ ಸ್ಪಂದಿಸುವ ಮನೋಭಾವ ಬೆಳೆಸಿ: ಡಾ.ರವೀಂದ್ರನಾಥ ಶ್ಯಾನುಭೋಗ್

Update: 2021-09-18 13:39 GMT

ಉಡುಪಿ, ಸೆ.18: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಸಾಮಾನ್ಯರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು. ಮುಂದಿನ ಜನಾಂಗಕ್ಕೆ ಯೋಗ್ಯ ಹಾಗೂ ಪರಿಪೂರ್ಣ ಮಾಹಿತಿಯನ್ನು ನೀಡಲಾಗುವುದು. ಸಹಾಯ ಅರಸಿ ಬರುವವ ರನ್ನು ವಿನಾಕಾರಣ ಅಲೆದಾಡಿಸದೆ ಸಮಸ್ಯೆಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶ್ಯಾನುಭೋಗ್ ಹೇಳಿದ್ದಾರೆ.

ಕುಂಜಿಬೆಟ್ಟು ವೈಕುಂಠ ಬಾಳಿಕ ಕಾನೂನು ಕಾಲೇಜಿನಲ್ಲಿ ಶನಿವಾರ ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ನೂತನ ವೆಬ್‌ಸೈಟ್ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಹಲವು ಮಂದಿ ತಮ್ಮ ನೋವುಗಳಿಗೆ ಪ್ರತಿಷ್ಠಾನದ ಮೂಲಕ ಪರಿಹಾರ ಕಂಡುಕೊಂಡಿದ್ದಾರೆ. ಅಕ್ಕುಲೀಲಾ ಪ್ರಕರಣ ಸುಪ್ರೀಂ ಕೋರ್ಟ್ ತನಕ ಹೋಗಿ ನ್ಯಾಯ ದೊರೆಯುವಂತೆ ಮಾಡಿದೆ. ಬಳಿಕ ಇಂತಹ ಹಲವಾರು ಪ್ರಕರಣಗಳು ಇತ್ಯರ್ಥ ಕಂಡಿವೆ. ಸುಮಾರು 800ಕ್ಕೂ ಅಧಿಕ ಹಿರಿಯ ನಾಗರಿಕರಿಗೆ ಮಾರ್ಗ ದರ್ಶನ ನೀಡಲಾಗಿದೆ. ಜಿಲ್ಲೆ, ರಾಜ್ಯ, ಹೊರರಾಜ್ಯಗಳ ಹಲವಾರು ಮಂದಿ ನಾಗರಿಕರು ಇಂತಹ ಪ್ರಕರಣದ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದರು.

ಕೊಂಡಾಡಿ ಕೊರಗ ಕಾಲನಿ ಅಸೋಸಿಯೇಶನ್‌ನ ಮಹಾಲಕ್ಷ್ಮೀ ಹಾಗೂ ಝುಬೇದಾ ವೆಬ್‌ಸೈಟ್ ಅನಾವರಣ ಮಾಡಿದರು. ಬಳಿಕ ಝುಬೇದಾ ಮಾತನಾಡಿ, ಕೊಂಡಾಡಿ ಭೂಮಿಗಾಗಿ 11 ವರ್ಷಗಳಿಂದ ಹೋರಾಟ ಮಾಡಿದ್ದೆವು. ಯಾವ ಸಂಘಟನೆಯ ಬೆಂಬಲವೂ ನಮಗಿರಲಿಲ್ಲ. ಹಕ್ಕುಪತ್ರ ಸಿಕ್ಕಿದರೂ ಭೂಮಿ ಎಲ್ಲಿ ಎಂದು ತಿಳಿಸಿರಲಿಲ್ಲ. ಇದಕ್ಕಾಗಿ ಹಲವಾರು ಬಾರಿ ಅಲೆದಾಟ ಮಾಡಬೇಕಾಯಿತು. ಬಳಿಕ ಪ್ರತಿಷ್ಠಾನದ ಮೂಲಕ ನಮ್ಮ ಕೆಲಸ ವೇಗವಾಗಿ ನಡೆಯಿತು ಎಂದರು.

ಅಕ್ಕು ಶೇರಿಗಾರ್ತಿ ಮುಖ್ಯ ಅತಿಥಿಯಾಗಿದ್ದರು. ಫಲಾನುಭವಿಗಳಾದ ಭೋಜ ಶೆಟ್ಟಿ, ವಿಕ್ಟರ್ ಡಿಸೋಜ, ದಿನೇಶ್ ಪೂಜಾರಿ, ಮೇರಿ ಡಿಸೋಜ, ಸಾಫ್ಟ್‌ವೇರ್ ಡೆವೆಲಪರ್ ಸುಜಿತ್ ಉಪಸ್ಥಿತರಿದ್ದರು. ವೈಕುಂಠ ಬಾಳಿಗ ಕಾನೂನು ಕಾಲೇಜಿನ ಪ್ರಾಂಶುಪಾಲೆ ಡಾ.ನಿರ್ಮಲಾ ಕುಮಾರಿ ಸ್ವಾಗತಿಸಿದರು. ಪೃಥ್ವಿಶಾ ಪ್ರಕಾಶ್ ವಂದಿಸಿದರು. ಹರ್ಷಿತಾ ತುಂಗೇಶ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News