ಮಲ್ಲಾರು: ಪೋಷಣ್ ಅಭಿಯಾನ ಕಾರ್ಯಕ್ರಮ

Update: 2021-09-18 13:41 GMT

ಕಾಪು, ಸೆ.18: ಆಧುನಿಕ ಫ್ಯಾಷನ್‌ಗೆ ಬಲಿ ಬಿದ್ದು ಮನುಷ್ಯನು ತನ್ನ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡು ಹೊಸ ಹೊಸ ರೋಗಕ್ಕೆ ಒಳಗಾಗುತ್ತಿ ದ್ದಾನೆ. ಬರ್ಗರ್, ಪಿಜ್ಜಾದಂತಹ ಆಧುನಿಕ ತಿಂಡಿ, ತಿನಿಸುಗಳ ಸೇವನೆಯಿಂದ ಮಕ್ಕಳಿಂದ ಹಿಡಿದು ಹಿರಿಯರಿಗೂ ಪೌಷ್ಟಿಕ ಅಂಶ ದೊರಕದೆ, ದೇಹದಲ್ಲಿ ರಕ್ತಹೀನತೆ, ರಕ್ತದೊತ್ತ್ತಡ, ಬೊಜ್ಜು ಬೆಳೆಯಲು ಕಾರಣವಾಗುತ್ತದೆ. ಆದ್ದರಿಂದ ನೈಸರ್ಗಿಕ ಆಗಿರುವ ಹಣ್ಣು, ಹಂಪಲು ಸೇವಿಸಿ, ಹಾಲು, ತರಕಾರಿ, ಮೀನು, ಮಾಂಸಗಳ ಆಹಾರವನ್ನು ಮನೆಯಲ್ಲಿಯೇ ತಯಾರಿಸಿ ಸೇವಿಸಿದಾಗ ಆರೋಗ್ಯ ಪೂರ್ಣ ವಾಗಿರಲು ಸಾಧ್ಯ ಎಂದು ಜಮಾಅತೆ ಇಸ್ಲಾಮಿ ಹಿಂದ್ ಕಾಪು ವರ್ತುಲದ ಅಧ್ಯಕ್ಷ ಅನ್ವರ್ ಅಲಿ ಕಾಪು ಹೇಳಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಡುಪಿ ಜಿಲ್ಲೆ, ಶಿಶು ಅಭಿವೃದ್ಧಿ ಯೋಜನೆ ಉಡುಪಿ ಇದರ ವತಿಯಿಂದ ಶನಿವಾರ ಮಲ್ಲಾರು ಅಂಗನವಾಡಿ ಕೇಂದ್ರದಲ್ಲಿ ನಡೆದ ಪೋಷಣ್ ಅಭಿಯಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಆಹಾರದ ಕುರಿತು ಮಾಹಿತಿ ನೀಡಿದರು. ಪ್ರಾಥಮಿಕ ಹಿರಿಯ ಸುರಕ್ಷತಾ ಅಧಿಕಾರಿ ನಿರ್ಮಲಾ ಮೆಂಡನ್, ಮದ್ದುಗಳ ಸೇವನೆ ಬಗ್ಗೆ ಮಾಹಿತಿ ನೀಡಿದರು. ಕಾಪು ಪುರಸಭಾ ಮಾಜಿ ಸದಸ್ಯ ಇಮ್ರಾನ್ ಮಜೂರು, ಮಲ್ಲಾರ್ ಅಂಗನವಾಡಿ ಕಾರ್ಯಕರ್ತೆ ರೇಖಾ ನಾಯ್ಕ್, ಅಂಗನವಾಡಿ ಸಹಾಯಕಿ ಮಲ್ಲಿಕಾ, ಜಯ, ಆಶಾ ಕಾರ್ಯಕರ್ತೆ ಉಷಾ ಉಮೇಶ್ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.

ಪ್ರಾಥಮಿಕ ಹಿರಿಯ ಸುರಕ್ಷಾ ಅಧಿಕಾರಿ ಯಶೋಧಾ ಅಡ್ಯಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಡಗರಗುತ್ತು ಅಂಗನವಾಡಿ ಕಾರ್ಯಕರ್ತೆ ವಿದ್ಯಾ ಪ್ರಶಾಂತ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News