ಪಕ್ಷದ ನಿರ್ಧಾರದಿಂದ ನನಗೆ ಅವಮಾನವಾಗಿದೆ: ರಾಜೀನಾಮೆ ಬಳಿಕ ಅಮರಿಂದರ್‌ ಸಿಂಗ್‌ ಹೇಳಿಕೆ

Update: 2021-09-18 14:44 GMT

ಹೊಸದಿಲ್ಲಿ: ಪಂಜಾಬ್‌ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಕಾಂಗ್ರೆಸ್‌ ಪಕ್ಷದ ನಾಯಕತ್ವದ ವಿರುದ್ಧ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಕಾಂಗ್ರೆಸ್‌ ಪಕ್ಷದ ನಾಯಕತ್ವದ ಈ ತೀರ್ಮಾನವು ನನ್ನನ್ನು ಅವಮಾನಿತನನ್ನಾಗಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರ ಬಳಿ ತೆರಳಿ ರಾಜೀನಾಮೆ ಸಲ್ಲಿಸಿದ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

"ಕಳೆದ ಎರಡು ತಿಂಗಳಲ್ಲಿ ಕಾಂಗ್ರೆಸ್ ನಾಯಕತ್ವದಿಂದ ನಾನು ಮೂರು ಬಾರಿ ಅವಮಾನಕ್ಕೊಳಗಾಗಿದ್ದೆ. ಈ ಹಿಂದೆ ಶಾಸಕರನ್ನು ಎರಡು ಬಾರಿ ದಿಲ್ಲಿಗೆ ಕರೆಸಲಾಗಿತ್ತು ಮತ್ತು ಈಗ ಅವರು ಇಂದು ಚಂಡೀಗಢದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯನ್ನು ಕರೆದಿದ್ದಾರೆ. ನನ್ನ ಸಾಮರ್ಥ್ಯದ ಕುರಿತಾದಂತೆ ಅನುಮಾನಗಳಿದ್ದಲ್ಲಿ ನಾನು ಅವಮಾನಿತನಾಗುತ್ತೇನೆ" ಎಂದು ಅಮರೀಂದರ್ ಸಿಂಗ್ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ಸಮಯ ಸಂದರ್ಭ ಬಂದಾಗ ನನ್ನ ಭವಿಷ್ಯದ ಆಯ್ಕೆಗಳನ್ನು ಪರಿಶೋಧನೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ ಅಮರಿಂದರ್‌ ಸಿಂಗ್‌, ಮುಂದಿನ ನಡೆಯನ್ನು ತನ್ನ ಬೆಂಬಲಿಗರೊಂದಿಗೆ ಚರ್ಚಿಸಿದ ಬಳಿಕ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ. "ಯಾವತ್ತೂ ಆಯ್ಕೆಗಳು ಇದ್ದೇ ಇರುತ್ತದೆ. ಸಮಯ ಬಂದಾಗ ನಾನು ಆ ಆಯ್ಕೆಯನ್ನು ಬಳಸುತ್ತೇನೆ. ಸದ್ಯಕ್ಕೆ ನಾನು ಕಾಂಗ್ರೆಸ್‌ ನಲ್ಲೇ ಇದ್ದೇನೆ ಎಂದು ರಾಜೀನಾಮೆ ಸಲ್ಲಿಸಿದ ಬಳಿಕ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News