ದಿಲ್ಲಿ ಹಿಂಸಾಚಾರ ಪ್ರಕರಣ: ಪೊಲೀಸರ ವಿಳಂಬ ನೀತಿಗೆ ಕೋರ್ಟ್ ತರಾಟೆ

Update: 2021-09-18 14:47 GMT

ಹೊಸದಿಲ್ಲಿ: ದಿಲ್ಲಿ ಹಿಂಸಾಚಾರ ಸಂಬಂಧಿತ ಕೇಸುಗಳ ಶೀಘ್ರ ವಿಚಾರಣೆಗಾಗಿ ಸೂಕ್ತ ಕ್ರಮಕೈಗೊಳ್ಳಲು ವಿಫಲರಾಗಿರುವುದಕ್ಕೆ ದಿಲ್ಲಿ ಪೊಲೀಸರನ್ನು ದಿಲ್ಲಿಯ ಚೀಫ್ ಮೆಟ್ರೋಪಾಲಿಟನ್ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. ಈ ಪ್ರಕರಣಗಳನ್ನು ಖುದ್ದಾಗಿ ಪರಿಶೀಲಿಸುವಂತೆ ಹಾಗೂ ಪ್ರಕರಣಗಳ ವಿಚಾರಣೆ ಆದಷ್ಟು ಬೇಗ ನಡೆಯುವಂತೆ ಖುದ್ದಾಗಿ ನೋಡಿಕೊಳ್ಳುವಂತೆ ದಿಲ್ಲಿ ಪೊಲೀಸ್ ಆಯುಕ್ತರಿಗೆ ನ್ಯಾಯಾಲಯ ಸೂಚಿಸಿದೆ.

ಸತತ ಸೂಚನೆಯ ನಂತರವೂ ಪ್ರಾಸಿಕ್ಯೂಟರ್ ಪ್ರಕರಣವೊಂದರ ವಿಚಾರಣೆಗಾಗಿ ನ್ಯಾಯಾಲಯದೆದುರು ಹಾಜರಾಗದೇ ಇರುವುದು ಹಾಗೂ ತನಿಖಾಧಿಕಾರಿ ವಿಳಂಬವಾಗಿ, ಪೊಲೀಸ್ ಫೈಲ್ ಓದದೆಯೇ ಆಗಮಿಸಿದ ನಂತರ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅರುಣ್ ಕುಮಾರ್ ಗರ್ಗ್ ಮೇಲಿನ ಮಾತುಗಳನ್ನು ಆಡಿದ್ದಾರೆ.

ಒಂದು ಪ್ರಕರಣದಲ್ಲಿ ಆರೋಪಿ ವಿರುದ್ಧ ದೋಷಾರೋಪ ಹೊರಿಸುವ ಕುರಿತಾದ ವಾದ ಮಂಡನೆ ವೇಳೆ ತನಿಖಾಧಿಕಾರಿ ಕೋರ್ಟ್ ಪ್ರಶ್ನೆಗಳಿಗೆ ಉತ್ತರಿಸಲು  ವಿಫಲರಾದ ನಂತರ  ನ್ಯಾಯಾಲಯ ದಿಲ್ಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.

"ಇಂತಹ ನಿರ್ಲಕ್ಷ್ಯಕಾರಿ ಧೋರಣೆ ಕುರಿತಂತೆ ಸತತವಾಗಿ ಡಿಸಿಪಿ ಹಾಗೂ ಪೊಲೀಸ್ ಆಯುಕ್ತರಿಗೆ ತಿಳಿಸಲಾಗಿತ್ತಾದರೂ ಅವರು ಯಾವುದೇ ಕ್ರಮಕೈಗೊಂಡಿಲ್ಲವೆಂದು ಕಾಣುತ್ತದೆ ಅಥವಾ ಕೈಗೊಂಡಿದ್ದಲ್ಲಿ ಅದನ್ನು ನ್ಯಾಯಾಲಯದ ಗಮನಕ್ಕೆ ತಂದಿಲ್ಲವೆಂದು ಕಾಣಿಸುತ್ತದೆ.

ಪ್ರಕರಣಗಳ ವಿಚಾರಣೆ ಆದಷ್ಟು ಬೇಗ ನಡೆಯುವಂತಾಗಲು ಅಗತ್ಯ ಕ್ರಮಗಳನ್ನು ಪೊಲೀಸರು ಕೈಗೊಳ್ಳದೇ ಇದ್ದಲ್ಲಿ ಪ್ರತಿಕೂಲ ಆದೇಶ ಹೊರಡಿಸುವುದು ಅನಿವಾರ್ಯವಾಗಬಹುದು" ಎಂದೂ ನ್ಯಾಯಾಲಯ ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News