ಭಾರತವು ಶೀಘ್ರವೇ ತನ್ನ ಮೊದಲ ’ಎಲೆಕ್ಟ್ರಿಕ್ ಹೆದ್ದಾರಿ’ಯನ್ನು ಪಡೆಯಬಹುದು: ನಿತಿನ್‌ ಗಡ್ಕರಿ

Update: 2021-09-18 15:52 GMT

ಹೊಸದಿಲ್ಲಿ,ಸೆ.18: ದಿಲ್ಲಿ ಮತ್ತು ಜೈಪುರ ನಡುವೆ ‘ಎಲೆಕ್ಟ್ರಿಕ್ ಹೆದ್ದಾರಿ ’ ನಿರ್ಮಾಣದ ಪರಿಕಲ್ಪನೆಯ ಬಗ್ಗೆ ಕೇಂದ್ರ ಸರಕಾರವು ಚಿಂತನೆಯನ್ನು ನಡೆಸುತ್ತಿದೆ. ತನ್ನ ಕನಸಿನ ಯೋಜನೆಯಾಗಿರುವ ಎಲೆಕ್ಟ್ರಿಕ್ ಹೆದ್ದಾರಿಯನ್ನು ಇವೆರಡು ನಗರಗಳ ನಡುವೆ ನಿರ್ಮಿಸುವ ಕುರಿತು ಈಗಾಗಲೇ ವಿದೇಶಿ ಕಂಪನಿಯೊಂದಿಗೆ ಮಾತುಕತೆಗಳು ನಡೆಯುತ್ತಿವೆ ಮತ್ತು ಮಾತುಕತೆಗಳು ಯಶಸ್ವಿಯಾದರೆ ಶೀಘ್ರವೇ ನಿರ್ಮಾಣ ಕಾಮಗಾರಿ ಆರಂಭಗೊಳ್ಳಬಹುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಇಲ್ಲಿ ಹೇಳಿದರು.

ಏನಿದು ಎಲೆಕ್ಟ್ರಿಕ್ ಹೆದ್ದಾರಿ?

ವಿಶ್ವವು ವಾಹನಗಳಿಗಾಗಿ ಸಾಂಪ್ರದಾಯಿಕ ಇಂಧನಗಳ ಬದಲು ಪರ್ಯಾಯ ಶಕ್ತಿಮೂಲಗಳತ್ತ ಸಾಗುತ್ತಿರುವ ಈ ಸಂದರ್ಭದಲ್ಲಿ ವಿದ್ಯುತ್ ಚಾಲಿತ ಮೋಟರ್ ವಾಹನಗಳು ಹೆಚ್ಚು ಜನಪ್ರಿಯಗೊಳ್ಳುತ್ತಿವೆ. ಉದ್ದೇಶಿತ ಎಲೆಕ್ಟ್ರಿಕ್ ಅಥವಾ ವಿದ್ಯುತ್ ಹೆದ್ದಾರಿ ಯೋಜನೆಯು ಸಾಕಾರಗೊಂಡರೆ ವಿದ್ಯುತ್ ಚಾಲಿತ ವಾಹನಗಳು ಅದರಲ್ಲಿ ಸಂಚರಿಸಲಿವೆ ಮತ್ತು ಅವುಗಳಿಗೆ ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ಅಳವಡಿಸಲಾಗಿರುತ್ತದೆ. ಇಂತಹ ಮೊದಲ ಹೆದ್ದಾರಿಯು ದಿಲ್ಲಿ-ಜೈಪುರ ನಡುವೆ ನಿರ್ಮಾಣಗೊಳ್ಳಲಿದ್ದು,ಅದು ಯಶಸ್ವಿಯಾದರೆ ದಿಲ್ಲಿ-ಮುಂಬೈ ನಡುವೆ ಇನ್ನೊಂದು ಎಲೆಕ್ಟ್ರಿಕ್ ಹೆದ್ದಾರಿ ನಿರ್ಮಾಣಗೊಳ್ಳಬಹುದು.

ವಿದ್ಯುತ್ ಚಾಲಿತ ವಾಹನಗಳೆಂದರೆ ಲಘು ವಾಹನಗಳು ಮಾತ್ರವಲ್ಲ,ಬಸ್,ಟ್ರಕ್ ಮತ್ತು ರೈಲ್ವೆ ಇಂಜಿನ್ಗಳೂ ಅಂತಿಮವಾಗಿ ವಿದ್ಯುತ್ನಿಂದ ಚಲಿಸಬಹುದು ಎಂದು ಹೇಳಿದ ಗಡ್ಕರಿ,ಎಲೆಕ್ಟ್ರಿಕ್ ಹೆದ್ದಾರಿ ನಿರ್ಮಾಣ ತನ್ನ ಕನಸಾಗಿದೆ,ಆದರೆ ಯೋಜನೆಯಿನ್ನೂ ಪ್ರಸ್ತಾವನೆಯ ಹಂತದಲ್ಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News