ವಿಶ್ವಾಸದ ಮನೆಯಿಂದ 12 ವರ್ಷಗಳ ಬಳಿಕ ಒಂದಾದ ತಾಯಿ ಮಕ್ಕಳು!

Update: 2021-09-18 16:07 GMT

ಉಡುಪಿ, ಸೆ.18: ಮಾನಸಿಕ ಅಸ್ವಸ್ಥರಾಗಿ ಬೀದಿ ಬೀದಿ ಅಲೆದಾಡುತ್ತಿದ್ದ ಅಸ್ಸಾಂ ಮೂಲದ ಮಲ್ಲಿಕಾ ಬೇಗಂ ಯಾನೆ ಖತೂನ್(55) ಇದೀಗ ಶಂಕರ ಪುರದ ವಿಶ್ವಾಸದ ಮನೆ ಅನಾಥಾಶ್ರಮದ ಆರೈಕೆಯಿಂದ ಗುಣಮುಖರಾಗಿ 12 ವರ್ಷಗಳ ನಂತರ ತನ್ನ ಮಕ್ಕಳನ್ನು ಸೇರಿಕೊಂಡಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವಾಸದ ಮನೆಯ ಸಂಸ್ಥಾಪಕ ಪಾ.ಸುನೀಲ್ ಜಾನ್ ಡಿಸೋಜ, ಬೇಗಂಗೆ ಐವರು ಮಕ್ಕಳಿದ್ದು, ಅವರಲ್ಲಿ ಎರಡನೇ ಮಗ ತಹಜುದ್ದೀನ್ ಹಾಗೂ ಸಂಬಂಧಿಕರೊಬ್ಬರು ಸೆ.17ರಂದು ಮಲ್ಲಿಕಾರನ್ನು ಕರೆದುಕೊಂಡು ಹೋಗಲು ಆಗಮಿಸಿದ್ದಾರೆ. ಇವರು ಇಂದು ಇಲ್ಲಿಂದ ಹೊರಟು ನಾಲ್ಕು ದಿನಗಳಲ್ಲಿ ತಮ್ಮ ಊರು ಸೇರಲಿದ್ದಾರೆ ಎಂದರು.

ಮಂಗಳೂರಿನಲ್ಲಿ ಮಾನಸಿಕ ಅಸ್ವಸ್ಥರಾಗಿ, ಊಟವಿಲ್ಲದೆ ಅಲೆದಾಡುತ್ತಿದ್ದ ಇವರನ್ನು 2009ರ ಸೆ.14ರಂದು ವಿಶ್ವಾಸದ ಮನೆಗೆ ಕರೆ ತರಲಾಯಿತು. ನಂತರ ಅಲ್ಲಿನ ಆರೈಕೆ, ಪ್ರೀತಿ ಮತ್ತು ಔಷಧೋಪಚಾರದಿಂದ ಒಂದು ತಿಂಗಳ ಒಳಗೆ ಗುಣಮುಖರಾದರು. ಬಳಿಕ ತನ್ನ ಹೆಸರು, ಊರು ತಿಳಿಸಿದ ಅವರು, ತನ್ನ ಊರಿಗೆ ಹೋಗಬೇಕೆಂದು ಹೇಳುತ್ತಿದ್ದರು.

ವಿದ್ಯಾರ್ಥಿಯಿಂದ ವಿಳಾಸ ಪತ್ತೆ

ಬಂಗಾಳಿ ಹೊರತು ಬೇರೆ ಭಾಷೆ ಬರದಿರುವುದರಿಂದ ಯಾರಿಗೂ ಅವರು ಏನು ಹೇಳುತ್ತಿದ್ದರೆಂದು ಅರ್ಥ ಆಗುತ್ತಿರಲಿಲ್ಲ. ಮುಂದೆ ಆಕೆ ತಿಳಿಸಿದ ವಿಳಾಸಕ್ಕೆ ವಿಶ್ವಾಸದ ಮನೆಯಿಂದ ಸುಮಾರು 25 ಪತ್ರಗಳನ್ನು ಬರೆದೆವು. ಆದರೆ ಎಲ್ಲ ಪತ್ರಗಳು ವಾಪಾಸ್ಸು ಬಂದವು. ಅಲ್ಲಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಪಂದಿಸಿದರೂ ವಿಳಾಸ ಪತ್ತೆ ಹಚ್ಚಲು ಸಾಧ್ಯವಾಗರಿಲಿಲ್ಲ ಎಂದು ಅವರು ವಿವರಿಸಿದರು.

ಆಶ್ರಮಕ್ಕೆ ಬಂದವರೆಲ್ಲರ ಬಳಿ ನನ್ನನ್ನು ಊರಿಗೆ ಕರೆದುಕೊಂಡು ಹೋಗಿ ಎಂದು ಅಂಗಲಾಚಿ ಬೇಡಿಕೊಂಡು ಅಳುತ್ತಿದ್ದರು. ಇವರ ನಂತರ ಆಶ್ರಮಕ್ಕೆ ಬಂದು ಗುಣಮುಖರಾಗಿ ವಾಪಾಸ್ಸು ಊರಿಗೆ ಹೋದರೆ ಕಣ್ಣೀರು ಹಾಕುತ್ತಿದ್ದರು. ಇವರನ್ನು ನಾವು ಸಮಾಧಾನ ಪಡಿಸಿ ಧೈರ್ಯ ತುಂಬುತ್ತಿದ್ದೇವು ಎಂದು ಅವರು ತಿಳಿಸಿದರು.

ಸಂಸ್ಥೆಯಲ್ಲಿ ಶಿಬಿರ ಮಾಡುವುದಕ್ಕಾಗಿ ತಿಂಗಳಿಗೊಮ್ಮೆ ಮಣಿಪಾಲ ಕೆಎಂಸಿ ವೈದ್ಯರ ತಂಡ ವಿದ್ಯಾರ್ಥಿಗಳ ಜೊತೆ ಬರುತ್ತಿದ್ದಾರೆ. ಹೀಗೆ ಶಿಬಿರಕ್ಕೆ ಬಂದ ತಂಡದಲ್ಲಿದ್ದ ಅಸ್ಸಾಂನ ವಿದ್ಯಾರ್ಥಿಯೊಬ್ಬಳು ಮಲ್ಲಿಕಾ ಬೇಗಂ ಜೊತೆ ಮಾತನಾಡಿ ಕೆಲವು ಮಾಹಿತಿ ಸಂಗ್ರಹಿಸಿ ಅವರ ವಿಳಾಸ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಹೀಗೆ ಮಲ್ಲಿಕಾ ಬೇಗಂರ ದೊಡ್ಡ ಮಗನನ್ನು ಸಂಪರ್ಕಿಸಿ, ತಾಯಿ ಜೊತೆ ಮಾತನಾಡಿಸಿದೆವು. ಮಕ್ಕಳು ಸಿಕ್ಕಿದಕ್ಕೆ ಮಲ್ಲಿಕಾ ಬೇಗಂ ಸಾಕಷ್ಟು ಖುಷಿ ಪಟ್ಟರು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾ ಬೇಗಂ, ತಹಜುದ್ದೀನ್, ಸಂಸ್ಥೆಯ ಉಪಾಧ್ಯಕ್ಷ ಮ್ಯಾಥ್ಯೂ ಕೆಸ್ತಲಿನೋ, ವಕೀಲ ದೇವಿನ್ ಶೆಟ್ಟಿ ಉಪಸ್ಥಿತರಿದ್ದರು.

‘ನಾನು 12 ವರ್ಷ ಇರುವಾಗ ನಮ್ಮ ತಂದೆ ತೀರಿ ಹೋದ ವಿಚಾರದಲ್ಲಿ ತಾಯಿ ಮಾನಸಿಕ ಅಸ್ವಸ್ಥಕ್ಕೆ ಒಳಗಾದರು. ಒಮ್ಮೆ ಅವರು ಮನೆಯಿಂದ ನಾಪತ್ತೆ ಯಾದರು. ನಾವು ಹುಡುಕಾಟ ನಡೆಸಿದೆವು. ಎಲ್ಲೂ ಪತ್ತೆಯಾಗಿಲ್ಲ. ಸುಮಾರು 12 ವರ್ಷಗಳ ನಂತರ ನನ್ನ ತಾಯಿ ನನಗೆ ಸಿಕ್ಕಿದ್ದಾರೆ. ಇದಕ್ಕಿಂತ ದೊಡ್ಡ ಖುಷಿಯ ವಿಚಾರ ಇನ್ನೊಂದಿಲ್ಲ’
-ತಹಜುದ್ದೀನ್, ಮಲ್ಲಿಕಾ ಬೇಗಂರ ಮಗ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News