ಪ್ರಧಾನಿ ಸಾಧನೆಗಳ ಕುರಿತು ಹುಟ್ಟುಹಬ್ಬದಂದು ಬಿಜೆಪಿ ಪ್ರಕಟಿಸಿದ ವೀಡಿಯೋದಲ್ಲಿ ಅಮೆರಿಕದ ಬಹುಮಹಡಿ ಕಟ್ಟಡ !

Update: 2021-09-19 07:27 GMT

ಹೊಸದಿಲ್ಲಿ: ಶುಕ್ರವಾರದಂದು ಪ್ರಧಾನಿ ನರೇಂದ್ರ ಮೋದಿ ಜನ್ಮದಿನವನ್ನು ಬಹುತೇಕ ಸಾಮಾಜಿಕ ತಾಣ ಬಳಕೆದಾರರು ʼರಾಷ್ಟ್ರೀಯ ನಿರುದ್ಯೋಗ ದಿನʼವನ್ನಾಗಿ ಆಚರಿಸಿದ್ದರೆ ಬಿಜೆಪಿ ನಾಯಕರು ಮತ್ತು ಬೆಂಬಲಿಗರು ತಮ್ಮದೇ ರೀತಿಯಲ್ಲಿ ಆಚರಿಸಿದ್ದರು. ಪ್ರಧಾನಿಯ ಸಾಧನೆಗಳನ್ನು ಬಿಂಬಿಸುವ ಸಲುವಾಗಿ ಬಿಜೆಪಿಯು ಅಂದು ವೀಡಿಯೊವೊಂದನ್ನು ಬಿಡುಗಡೆ ಮಾಡಿತ್ತು. ಆ ವೀಡಿಯೋದಲ್ಲಿ ಅಮೆರಿಕಾದ ಲಾಸ್‌ ಏಂಜಲೀಸ್‌ ನ ಬಹುಮಹಡಿ ಕಟ್ಟಡದ ಚಿತ್ರವನ್ನು ಅಳವಡಿಸಿ ನಗೆಪಾಟಲಿಗೀಡಾಗಿದೆ.

ಮೊನ್ನೆ ತಾನೇ ಉತ್ತರಪ್ರದೇಶ ಮುಖ್ಯಮಂತ್ರಿ ತನ್ನ ಆದಿತ್ಯನಾಥ್‌ ತನ್ನ ಸಾಧನೆಯೆಂಬಂತೆ ಕೋಲ್ಕತ್ತದ ಫ್ಲೈ ಓವರ್‌ ನ ಫೋಟೊ ಪ್ರಕಟಿಸಿದ್ದು ಸಾಮಾಜಿಕ ತಾಣದಾದ್ಯಂತ ವ್ಯಂಗ್ಯಕ್ಕೆ ಗುರಿಯಾಗಿತ್ತು.

ಎರಡು ನಿಮಿಷಗಳ 42 ಸೆಕೆಂಡುಗಳ ವೀಡಿಯೋ ಪ್ರಧಾನ ಮಂತ್ರಿ ಮೋದಿಯನ್ನು "ಕನಸುಗಾರ, ಪ್ರದರ್ಶಕ, ಸಾಧಕ" ಎಂದು ಹೊಗಳುತ್ತದೆ ಮಾತ್ರವಲ್ಲ, ಮೋದಿ ಸರ್ಕಾರದ ಅನೇಕ ಸಾಧನೆಗಳನ್ನು ಪಟ್ಟಿ ಮಾಡಿದೆ. "ಭಾರತದ ಶಿಕ್ಷಣ ಮತ್ತು ಕೌಶಲ್ಯಗಳನ್ನು ಪರಿವರ್ತಿಸುವ", "ಭಾರತದ ಸ್ವಚ್ಛತೆ ಮತ್ತು ನೈರ್ಮಲ್ಯದಲ್ಲಿ ಕ್ರಾಂತಿ ಮಾಡುವ" ಮತ್ತು "ಭಾರತದ ಆರ್ಥಿಕತೆಯನ್ನು ಪರಿಷ್ಕರಿಸುವ" ಇತರ ವಿಷಯಗಳ ಜೊತೆಗೆ "ಸುಧಾರಕ" ಎಂದು ಪ್ರಧಾನಮಂತ್ರಿಯನ್ನು ಬಿಂಬಿಸಲಾಗಿದೆ.

"21 ನೇ ಶತಮಾನವನ್ನು ಮುನ್ನಡೆಸುವ ಭಾರತದ ದೃಷ್ಟಿಕೋನವನ್ನು ಮಾರ್ಪಡಿಸಿದ್ದಕ್ಕಾಗಿ" ಅವರನ್ನು ಶ್ಲಾಘಿಸಲಾಗಿದೆ. ವೀಡಿಯೋದ ೨:೨೨ ಸೆಕೆಂಡ್‌ ನಲ್ಲಿ ಬಹುಮಹಡಿ ಸ್ಕೈಲೈನ್‌ ಕಟ್ಟಡವನ್ನು ತೋರಿಸಲಾಗಿದೆ. ವೀಕ್ಷಕರು ಇದು ಭಾರತದ ಯಾವುದಾದರೂ ಮೆಟ್ರೋ ನಗರದ ಚಿತ್ರವೆಂದು ಭಾವಿಸುವ ಸಾಧ್ಯತೆಯಿದೆ. ಆದರೆ ಇದು ಲಾಸ್‌ ಏಂಜಲೀಸ್‌ ನ ಸ್ಟಾಕ್‌ ಫೋಟೊ ಆಗಿದೆ. ಅದನ್ನು ಇಲ್ಲಿ ವೀಕ್ಷಿಸಬಹುದಾಗಿದೆ. ಈ ಹಿಂದೆ ಇದೇ ಫೋಟೊವನ್ನು ಪಾಕಿಸ್ತಾನದ ಬಲ್ಬ್‌ ಕಂಪೆನಿಯು ತನ್ನ ಜಾಹೀರಾತಿನಲ್ಲಿ ಬಳಸಿತ್ತು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News