ಮುಖ್ಯಮಂತ್ರಿಗೆ ಕೊಲೆ ಬೆದರಿಕೆ ಹಿನ್ನೆಲೆ: ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಬಂಧನ

Update: 2021-09-19 14:55 GMT
ಧರ್ಮೇಂದ್ರ

ಮಂಗಳೂರು, ಸೆ.19: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಬಹಿರಂಗ ಕೊಲೆ ಬೆದರಿಕೆವೊಡ್ಡಿದ ಪ್ರಕರಣದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರನನ್ನು ಮಂಗಳೂರು ಪೊಲೀಸರು ರವಿವಾರ ಬಂಧಿಸಿದ್ದು, ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ಸಹಿತ ಮೂವರು ವಶಕ್ಕೆ ಪಡೆಯಲಾಗಿದೆ ಎಂದು ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ. 

ಬಂಧಿತ ಧರ್ಮೇಂದ್ರ ವಿರುದ್ಧ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಡಾ.ಲೋಹಿತ್‌ಕುಮಾರ್ ಸುವರ್ಣ ಎಂಬವರು ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಧರ್ಮೇಂದ್ರನನ್ನು ಬಂಧಿಸಿರುವ ಮಂಗಳೂರು ಪೊಲೀಸರು, ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್, ಪ್ರೇಮ ಪೊಳಲಿ, ಸಂದೀಪ್ ಶೆಟ್ಟಿ ಅಡ್ಕ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕಾನೂನುಬಾಹಿರ ಚಟುವಟಿಕೆಯಲ್ಲಿ ತನಿಖೆ: ಕಮಿಷನರ್ 

ನಗರದ ಬಳ್ಳಾಲ್‌ ಬಾಗ್‌ನ ಪತ್ತುಮುಡಿ ಸೌಧ ಎಂಬಲ್ಲಿ ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಸೇರಿದಂತೆ ಹಲವರು ಸುದ್ದಿಗೋಷ್ಠಿ ನಡೆಸಿದ್ದರು. ಮೈಸೂರಿನ ನಂಜನಗೂಡು ದೇವಸ್ಥಾನ ಧ್ವಂಸ ಪ್ರಕರಣವನ್ನು ಹಿನ್ನೆಲೆಯಾಗಿ ಇಟ್ಟುಕೊಂಡು, ‘’ಹಿಂದೂಗಳ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಗಾಂಧೀಜಿಯನ್ನೇ ಬಿಟ್ಟಿಲ್ಲ ಇನ್ನು ನೀವೆಲ್ಲ ಯಾವ ಲೆಕ್ಕ’’ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ, ಸಂವಿಧಾನಾತ್ಮಕ ಹುದ್ದೆಯಲ್ಲಿನ ಪ್ರಮುಖರ ಬಗ್ಗೆಯೂ ಸಾಕಷ್ಟು ಮಾತಗಳನ್ನಾಡಿದ್ದಾರೆ. ಮುಖ್ಯಮಂತ್ರಿ ಸಹಿತ ಸಂವಿಧಾನಾತ್ಮಕ ಹುದ್ದೆಗಳಲ್ಲಿರುವ ವ್ಯಕ್ತಿಗಳ ವಿರುದ್ಧ ಹೇಳಿಕೆ ನೀಡುವ ಮೂಲಕ ಅಶಾಂತಿ ಸೃಷ್ಟಿಸುತ್ತಿರುವ ಬಗ್ಗೆ ಡಾ.ಲೋಹಿತ್‌ ಕುಮಾರ್ ಸುವರ್ಣ ಎಂಬವರು ದೂರು ದಾಖಲಿಸಿದ್ದರು ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಪ್ರಕರಣದ ಆರೋಪಿಗಳು ವೈಯಕ್ತಿಕವಾಗಿ ಹೇಳಿದ್ದಾರೋ? ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಎಲ್ಲರ ಅಭಿಪ್ರಾಯವೂ ಇದೇನಾ? ಪೂರ್ವಭಾವಿ ಸಭೆ ಕರೆದು ಇಂತಹ ಹೇಳಿಕೆ ನೀಡಲು ಮುಂದಾಗಿದ್ದರೇ ಅಥವಾ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಯೇ ಎನ್ನುವ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಮಂಗಳೂರು ಶಶಿಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಐಪಿಸಿಯ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಂಘಟನೆಯ ಹೆಸರನ್ನು ದುರುಪಯೋಗ ಪಡಿಸಿಕೊಂಡ ಆರೋಪವೂ ಇವರ ವಿರುದ್ಧ ಕೇಳಿ ಬಂದಿದೆ. ಪ್ರಕರಣದಲ್ಲಿ ಸದ್ಯ ಧರ್ಮೇಂದ್ರ ಬಂಧಿಸುವುದರ ಜೊತೆಗೆ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಉಳಿದವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಹೇಳಿದರು.

ಏನಿದು ಪ್ರಕರಣ? ‘‘ಹಿಂದೂಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿ ಗಾಂಧೀಜಿಯನ್ನು ಹತ್ಯೆ ಮಾಡಲು ಸಾಧ್ಯವಾಗುತ್ತದೆ ಎಂದ ಮೇಲೆ, ನಿಮ್ಮ ವಿಚಾರದಲ್ಲಿ ನಾವು ಆಲೋಚಿಸುವುದಕ್ಕೆ ಸಾಧ್ಯವಿಲ್ಲ ಅಂತೀರಾ ನೀವು? ನೆನಪಿಟ್ಟುಕೊಳ್ಳಿ , ನಿಮಗೆ ಬಹಳ ಕಷ್ಟವಾದೀತು’’ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡುವ ಮೂಲಕ ವಿವಾದ ಹುಟ್ಟು ಹಾಕಿದ್ದರು. ಅಲ್ಲದೆ ಸಂವಿಧಾನಾತ್ಮಕ ಹುದ್ದೆಗಳಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರ ವಿರುದ್ಧ ಕೊಲೆ ಬೆದರಿಕೆ ಹಾಕಿದ್ದರು. ಮಹಾತ್ಮ ಗಾಂಧೀಜಿ ಹಾಗೂ ಮುಖ್ಯಮಂತ್ರಿ ವಿರುದ್ಧದ ವಿವಾದಾತ್ಮಕ ಹೇಳಿಕೆಯು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಧರ್ಮೇಂದ್ರ ಸಹಿತ ಹಲವರ ವಿರುದ್ಧ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಡಾ.ಲೋಹಿತ್‌ ಕುಮಾರ್ ಸುವರ್ಣ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದರ ಬೆನ್ನಲ್ಲೇ ಪೊಲೀಸರು ಧರ್ಮೇಂದ್ರನನ್ನು ಬಂಧಿಸಿ, ಮೂವರನ್ನು ವಶಕ್ಕೆ ಪಡೆದಿದ್ದಾರೆ. ಉಳಿದವರಿಗಾಗಿ ಪತ್ತೆ ಕಾರ್ಯ ನಡೆದಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120-ಬಿ (ಪಿತೂರಿ), 153-ಎ (ಧರ್ಮಗಳ ನಡುವೆ ವೈರತ್ವ ಉತ್ತೇಜಿಸುವುದು), 505-2 (ಕಿಡಿಗೇಡಿತನ), 506 (ಕೊಲೆ ಬೆದರಿಕೆ), 465 (ಫೋರ್ಜರಿ), 468 (ಮೋಸದ ಉದ್ದೇಶಕ್ಕಾಗಿ ನಕಲು), (ಗಣ್ಯರ ಪ್ರತಿಷ್ಠೆಗೆ ಚ್ಯುತಿ), 149 (ಕಾನೂನುಬಾಹಿರ ಚಟುವಟಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News