ಪರ್ಕಳ ಭೂಸಂತ್ರಸ್ತರಿಗೆ ಪರಿಹಾರ ವಿಳಂಬ ವಿರೋಧಿಸಿ ಪ್ರತಿಭಟನೆ

Update: 2021-09-19 14:15 GMT

ಉಡುಪಿ, ಸೆ.19: ಪರ್ಕಳ ರಾ.ಹೆದ್ದಾರಿ 169ಎ ವಿಸ್ತರಣೆ ಕಾಮಗಾರಿಯ ಸಂತ್ರಸ್ತರಿಗೆ ಶೀಘ್ರ ಪರಿಹಾರ ಹಣ ಬಿಡುಗಡೆ ಮಾಡಬೇಕು ಮತ್ತು ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಇಂದು ಪರ್ಕಳದ ಬಾಬುರಾಯ ಸರ್ಕಲ್ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.

ಪರ್ಕಳ ಪ್ರದೇಶದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿರುವುದರಿಂದ ವಾಹನ ಚಾಲಕರಿಗೆ ತೊಂದರೆಯಾಗುತ್ತಿದ್ದು, ಇದರ ಜೊತೆಗೆ ಭೂಸಂತ್ರಸ್ತರಿಗೆ ಕಳೆದ ನಾಲ್ಕು ತಿಂಗಳಿಂದ ಪರಿಹಾರ ಹಣ ಬಿಡುಗಡೆ ಮಾಡದೆ ವಿಳಂಬ ಮಾಡುತ್ತಿದೆ ಎಂದು ಪ್ರತಿಭಟನಕಾರರು ಆರೋಪಿದರು. ಇದೇ ವೇಳೆ ಹದಗೆಟ್ಟ ರಸ್ತೆಯಲ್ಲಿ ಬಾಳೆಗಿಡ ನೆಡವು ಮೂಲಕ ಜಿಲ್ಲಾಡಳಿತ ಹಾಗೂ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ರಾಷ್ಟ್ರೀಯ ಹೆದ್ದಾರಿ ವಿಚಾರವಾಗಿ ಪರ್ಕಳದ ಜನತೆ ಕಳೆದ ಎರಡು ವರ್ಷಗಳಿಂದ ಕಷ್ಟ ಅನುಭವಪಿಸುತ್ತಿದ್ದಾರೆ. ಈಗಿನ ಜನಪ್ರತಿನಿಧಿಗಳು ಇದನ್ನು ನೋಡಿಯೂ ನೋಡದಂತೆ ವರ್ತಿಸುತ್ತಿದ್ದಾರೆ. ಈ ಬಗ್ಗೆ ಶಾಸಕರು, ಸಂಸದರು ಎಚ್ಚೆತ್ತು ಕೂಡಲೇ ರಸ್ತೆಯ ಕಾಮಗಾರಿ ಅವಧಿಯೊಳಗೆ ಪೂರ್ಣ ಗೊಳಿಸಬೇಕು ಮತ್ತು ಭೂಸಂತ್ರಸ್ತರಿಗೆ ಪರಿಹಾರ ಹಣ ಶೀಘ್ರ ಬಿಡುಗಡೆ ಮಾಡಬೇಕು ಒತ್ತಾಯಿಸಿದರು.

ಭೂಸಂತ್ರಸ್ತ ಗೋಪಾಲ ಆಚಾರ್ಯ ಮಾತನಾಡಿ, ಪರಿಹಾರ ನೀಡುವ ಬಗ್ಗೆ ಸಭೆ ನಡೆಸಿ ನಾಲ್ಕು ತಿಂಗಳು ಕಳೆದರೂ ನಮ್ಮ ಖಾತೆಗೆ ಯಾವುದೇ ಪರಿಹಾರ ಹಣ ಬಂದಿಲ್ಲ. ಎಲ್ಲ ದಾಖಲೆಗಳನ್ನು ನೀಡಿ, ಭೂಮಿ ಬಿಟ್ಟು ಕೊಟ್ಟರೂ ಜಿಲ್ಲಾಡಳಿತ ಹಾಗೂ ಸರಕಾರ ಈ ವಿಚಾರದಲ್ಲಿ ವಿಳಂಬ ಮಾಡುತ್ತಿದೆ. ನಮ್ಮ ಅಂಗಡಿ, ಮನೆಗಳನ್ನು ಈಗಾಗಲೇ ತೆರವು ಮಾಡಿದ್ದಾರೆ. ಆದರೆ ಕೊಟ್ಟ ಭರವಸೆ ಮಾತ್ರ ಇನ್ನೂ ಈಡೇರಿಸಿಲ್ಲ ಎಂದು ದೂರಿದರು.

ಕಾಂಗ್ರೆಸ್ ಮುಖಂಡ, ಅಮೃತ ಶೆಣೈ ಮಾತನಾಡಿ, ಇಲ್ಲಿನ ಅಂಗಡಿಗಳನ್ನು ತೆರವುಗೊಳಿಸಿ ಪರಿಹಾರ ನೀಡದ ಪರಿಣಾಮ ಭೂಸಂತ್ರಸ್ತರಿಗೆ ಅತ್ತ ಹಣವೂ ಇಲ್ಲ, ಇತ್ತ ಜೀವನ ಸಾಗಿಸಲು ದಾರಿಯೂ ಇಲ್ಲವಾಗಿದೆ. ಅದೇ ರೀತಿ ಇಲ್ಲಿನ ರಸ್ತೆ ಕೂಡ ಸಂಪೂರ್ಣ ಮಾಡಿಕೊಡಲಾಗುತ್ತಿದೆ. ಇಂದು ಸಾಂಕೇತಿಕವಾಗಿ ಮಾತ್ರ ಪ್ರತಿಭಟನೆ ನಡೆಸಲಾಗಿದೆ. ಮುಂದಿನ 15 ದಿನಗಳೊಳಗೆ ಪರಿಹಾರ ಹಾಗೂ ರಸ್ತೆ ದುರಸ್ತಿ ಮಾಡದಿದ್ದರೆ ರಸ್ತೆ ತಡೆ ತೀವ್ರ ಹೋರಾಟ ನಡೆಸಲಾಗು ವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸುಕೇಶ್ ಕುಂದರ್ ಹೆರ್ಗ, ಮೋಹನ್‌ದಾಸ್ ನಾಯಕ್, ಗಣೇಶ್‌ರಾಜ್ ಸರಳೇಬೆಟ್ಟು, ಗಣೇಶ್ ನೆರ್ಗಿ, ಸುಧಾಕರ್ ಪೂಜಾರಿ, ಸದಾನಂದ ಪೂಜಾರಿ, ಸತೀಶ್ ಶೆಟ್ಟಿ ಕೆಳಪರ್ಕಳ, ಅಶೋಕ್ ಸಾಲಿಯಾನ್ ಹೆರ್ಗ, ಗಣೇಶ್ ಮಾರುತಿನಗರ, ನವೀನ್ ಪೂಜಾರಿ ಶೆಟ್ಟಿಬೆಟ್ಟು, ದಿನೇಶ್ ಪೂಜಾರಿ ಮದಗ, ತುಳಜಾ ಉಪೇಂದ್ರ ನಾಯ್ಕ್, ಶಂಭು ಶೆಟ್ಟಿ, ರಾಜೇಶ್ ಪ್ರಭು ಪರ್ಕಳ ಮೊದಲಾದವರು ಉಪಸ್ಥಿತರಿದ್ದರು. ಮುಖೇಶ್ ಶೆಟ್ಟಿಗಾರ್ ಸ್ವಾಗತಿಸಿದರು. ವೆಂಕಟೇಶ್ ಶೆಟ್ಟಿಗಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News