ಕುಂದಾಪುರ ರಾ.ಹೆದ್ದಾರಿ ಸಮಸ್ಯೆ ತಿಂಗಳ ಅಂತ್ಯದೊಳಗೆ ಪರಿಹಾರಕ್ಕೆ ಸೂಚನೆ

Update: 2021-09-19 14:17 GMT

ಕುಂದಾಪುರ, ಸೆ.19: ಕುಂದಾಪುರ ಶಾಸ್ತ್ರಿ ಸರ್ಕಲ್ ಸುತ್ತಮುತ್ತಲಿನ ರಾಷ್ಟ್ರೀಯ ಹೆದ್ದಾರಿಯ ಮರು ಡಾಮರೀಕರಣ ಹಾಗೂ ಅಂಡರ್‌ಪಾಸ್ ಬಳಿಯ ಎಲ್ಲ ಸಮಸ್ಯೆಗಳನ್ನು ಈ ತಿಂಗಳ ಅಂತ್ಯದೊಳಗೆ ಇತ್ಯರ್ಥಪಡಿಸುವ ಭರವಸೆಯನ್ನು ರಾ.ಹೆದ್ದಾರಿ ಕಾಮಗಾರಿಯ ಗುತ್ತಿಗೆ ಕಂಪೆನಿ ನವಯುಗದ ಎಂಜಿನಿಯರ್ ಹಾಗೂ ಅಧಿಕಾರಿಗಳು ನೀಡಿದ್ದಾರೆ ಎಂದು ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ರಾಜು ಕೆ. ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರ ಫ್ಲೈಓವರ್, ಅಂಡರ್‌ಪಾಸ್ ಹಾಗೂ ಇತರ ಸಮಸ್ಯೆಗಳ ಕುರಿತು ನವಯುಗ ಸಂಸ್ಥೆಯ ಎಂಜಿನಿಯರ್, ಸಿಬಂದಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಶನಿವಾರ ಮಿನಿವಿಧಾನಸೌಧ ದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಕಳೆದ 6 ತಿಂಗಳಿನಿಂದ ಫ್ಲೈಓವರ್ ಕೆಳಗೆ ರಾಶಿ ಹಾಕಿದ ಗುಜುರಿ ವಸ್ತುಗಳ ತೆರವು ಮಾಡಲು ಸೂಚಿಸಿದ್ದರೂ ಈವರೆಗೆ ಯಾವುದೇ ತೆರವು ಕಾರ್ಯ ಮಾಡಿಲ್ಲ. ಇದೀಗ ಅದನ್ನು ತೆರವು ಮಾಡಲು ನಾಲ್ಕು ದಿನಗಳ ಕಾಲಾವಕಾಶ ನೀಡಲಾಗಿದೆ. ಶಾಸ್ತ್ರೀ ಸರ್ಕಲ್ ಆಸುಪಾಸಿನ ಹೆದ್ದಾರಿಯು ಸಂಪೂರ್ಣ ಹೊಂಡ-ಗುಂಡಿಗಳಿಂದ ಕೂಡಿದ್ದು, ಕೂಡಲೇ ಮರು ಡಾಮರೀಕರಣ ಮಾಡ ಬೇಕು ಎಂದು ಎಸಿ ಸೂಚನೆ ನೀಡಿದರು.
ಮಳೆ ಕಡಿಮೆಯಾದ ಕೂಡಲೇ ಅಂದರೆ ಈ ತಿಂಗಳಾಂತ್ಯದೊಳಗೆ ಮರು ಡಾಮರೀಕರಣ ಕಾಮಗಾರಿ ಮುಗಿಸುವ ಭರವಸೆಯನ್ನು ಕಂಪೆನಿಯ ಅಧಿಕಾರಿ ಗಳು ನೀಡಿದ್ದಾರೆ. ಇದರೊಂದಿಗೆ ಅಂಡರ್‌ಪಾಸ್, ಪ್ಲೈಓವರ್‌ನಿಂದ ಕೆಳಕ್ಕೆ ಮಳೆ ನೀರು ಬೀಳುವುದನ್ನು ಕೂಡ ಸರಿಪಡಿಸುವಂತೆ ತಿಳಿಸಲಾಗಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ತಹಶೀಲ್ದಾರ್ ಕಿರಣ್ ಗೌರಯ್ಯ, ಡಿವೈಎಸ್‌ಪಿ ಶ್ರೀಕಾಂತ್, ವೃತ್ತ ನಿರೀಕ್ಷಕ ಗೋಪಿಕೃಷ್ಣ, ಎಸ್‌ಐಗಳಾದ ಸದಾಶಿವ ಗವರೋಜಿ, ಸುದರ್ಶನ್, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಕಂದಾಯ ಅಧಿಕಾರಿ ದಿನೇಶ್, ಹೆದ್ದಾರಿ ಹೋರಾಟ ಸಮಿತಿಯ ಕೆಂಚನೂರು ಸೋಮಶೇಖರ್ ಶೆಟ್ಟಿ, ಬಂಟರ ಸಂಘದ ಆವರ್ಸೆ ಸುಧಾಕರ ಶೆಟ್ಟಿ ಮೊದಲಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News